ನವದೆಹಲಿ, ಡಿ.24 (DaijiworldNews/MB) : ''2021ರ ಜನವರಿ 1ರಿಂದ ವಾಹನಗಳಿಗೆ ಫಾಸ್ಟ್ಟ್ಯಾಗ್ ಕಡ್ಡಾಯವಾಗಲಿದೆ'' ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದರು.
ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು, ''ಹೊಸ ವರ್ಷದಿಂದ ದೇಶದ ಎಲ್ಲಾ ವಾಹನಗಳಿಗೆ ಫಾಸ್ಟ್ಟ್ಯಾಗ್ ಕಡ್ಡಾಯಗೊಳಿಸಲಾಗುತ್ತಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಪ್ರಕಟಿಸಿದ್ದಾರೆ'' ಎಂದು ತಿಳಿಸಿದೆ.
ಇನ್ನು ವರ್ಚುವಲ್ ಕಾರ್ಯವನ್ನು ಉದ್ದೇಶಿಸಿ ಮಾತನಾಡಿದ ನಿತಿನ್ ಗಢ್ಕರಿಯವರು, ''ಪ್ರಯಾಣಿಕರಿಗೆ ಫಾಸ್ಟ್ಯಾಗ್ ಇದ್ದರೆ ನಗದು ಪಾವತಿಗಾಗಿ ಟೋಲ್ ಪ್ಲಾಜಾಗಳಲ್ಲಿ ಕಾಯಬೇಕಾದ ಸ್ಥಿತಿ ಇರುವುದಿಲ್ಲ. ಇದು ಸಮಯ ಮತ್ತು ಇಂಧನವನ್ನು ಉಳಿಸಲು ಕೂಡಾ ಸಹಾಯ ಮಾಡುತ್ತದೆ'' ಎಂದು ಹೇಳಿದರು.
2016ರಲ್ಲಿ ಫಾಸ್ಟ್ಟ್ಯಾಗ್ಗಳನ್ನು ಟೋಲ್ ಪ್ಲಾಜಾಗಳಲ್ಲಿ ಎಲೆಕ್ಟ್ರಾನಿಕ್ ಶುಲ್ಕವನ್ನು ಪಾವತಿಸಲು ಅನುಕೂಲವಾಗಲೆಂದು ಪರಿಚಯಿಸಲಾಗಿದೆ. ಈ ಸಂದರ್ಭ ನಾಲ್ಕು ಬ್ಯಾಂಕುಗಳು ಒಟ್ಟಾಗಿ ಒಂದು ಲಕ್ಷಕ್ಕೂ ಅಧಿಕ ಫಾಸ್ಟ್ ಟ್ಯಾಗ್ ನೀಡಿದ್ದವು. 2017ರ ವೇಳೆಗೆ ಫಾಸ್ಟ್ ಟ್ಯಾಗ್ಗಳ ಸಂಖ್ಯೆ ಏಳು ಲಕ್ಷಕ್ಕೆ ಏರಿತು. 2018ರಲ್ಲಿ 34 ಲಕ್ಷಕ್ಕೂ ಅಧಿಕ ಫಾಸ್ಟ್ಟ್ಯಾಗ್ಗಳನ್ನು ಅಳವಡಿಸಲಾಗಿದೆ. ಸೆಂಟ್ರಲ್ ಮೋಟಾರು ವಾಹನ ನಿಯಮಗಳ ಪ್ರಕಾರ, 1989, ಡಿಸೆಂಬರ್ 1, 2017ರಿಂದ, ಹೊಸ ನಾಲ್ಕು ಚಕ್ರಗಳ ನೋಂದಣಿಗೆ ಫಾಸ್ಟ್ಯಾಗ್ ಅನ್ನು ಕಡ್ಡಾಯಗೊಳಿಸಲಾಗಿದೆ.