ನವದೆಹಲಿ, ಡಿ.24 (DaijiworldNews/MB) : ''ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ವಿರೋಧಿಸಿದ್ದಕ್ಕಾಗಿ ದೆಹಲಿ ಜಲ ಮಂಡಳಿಯ ಕಚೇರಿಯನ್ನು ಬಿಜೆಪಿ ಕಾರ್ಯಕರ್ತರು ದಾಳಿಗೈದು ಧ್ವಂಸಗೊಳಿಸಿದ್ದಾರೆ'' ಎಂದು ಎಎಪಿ ಮುಖಂಡ ರಾಘವ್ ಛಡ್ಡಾ ಆರೋಪಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡುರುವ ಅವರು, ''ಬಿಜೆಪಿಯ ಗೂಂಡಾಗಳು ದೆಹಲಿ ಜಲ ಮಂಡಳಿ ಕಚೇರಿಗೆ ನುಗ್ಗಿ ಧ್ವಂಸ ಮಾಡಿದರು. ರೈತರಿಗೆ ಬೆಂಬಲ ನೀಡಿರುವ ಎಎಪಿ ನಾಯಕರು ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಬೆದರಿಕೆಯೊಡ್ಡಿದರು. ಇವೆಲ್ಲ ದೃಶ್ಯವೂ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದು ದೆಹಲಿ ಪೊಲೀಸರ ಸಹಾಯದಿಂದಲೇ ನಡೆದಿದೆ ಎಂದು ಸ್ಪಷ್ಟವಾಗಿದೆ'' ಎಂದು ಆರೋಪಿಸಿದ್ದಾರೆ.
ಇನ್ನು ಈ ಘಟನೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ''ಇದು ತುಂಬಾ ಮುಜುಗರದ ಸಂಗತಿಯಾಗಿದೆ. ಆಮ್ ಆದ್ಮಿ ಪಕ್ಷ ಮತ್ತು ನನ್ನ ಸರ್ಕಾರ ತಮ್ಮ ಕೊನೆಯ ಉಸಿರಾಟದವರೆಗೂ ರೈತರೊಂದಿಗೆ ಸಂಪೂರ್ಣವಾಗಿ ಇರುತ್ತವೆ ಎಂಬುದನ್ನು ಬಿಜೆಪಿ ಅರ್ಥಮಾಡಿಕೊಳ್ಳಲಿ'' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
''ಇಂತಹ ಹೇಡಿತನ ದಾಳಿಗೆ ನಾವು ಹೆದರುವುದಿಲ್ಲ. ಬಿಜೆಪಿಯ ಇಂತಹ ದಾಳಿಗಳಿಂದ ಉತ್ತೇಜನಕ್ಕೆ ಒಳಗಾಗಬೇಡಿ ಎಂದು ನಾನು ಎಲ್ಲ ಕಾರ್ಮಿಕರಿಗೆ ಮನವಿ ಮಾಡುತ್ತೇನೆ. ರೈತರಿಗೆ ಸಹಾಯ ಮಾಡಿ ಮತ್ತು ಸಂಪೂರ್ಣವಾಗಿ ಬೆಂಬಲಿಸಿ'' ಎಂದು ಮನವಿ ಮಾಡಿದ್ದಾರೆ.