ಬಾಗಲಕೋಟೆ, ಡಿ.24 (DaijiworldNews/MB) : ''ಜಿಲ್ಲೆಗೆ ಲಂಡನ್ನಿಂದ ವಾಪಾಸ್ ಬಂದಿದ್ದವರ ಕುಟುಂಬಸ್ಥರಿಬ್ಬರಿಗೆ ಗುರುವಾರ ಕೊರೊನಾ ಸೋಂಕು ದೃಢಪಪಟ್ಟಿದ್ದು, ಇದು ಬ್ರಿಟನ್ನಲ್ಲಿ ಪತ್ತೆಯಾಗಿರುವ ಹೊಸ ಸ್ವರೂಪದ ಸೋಂಕೇ ಎಂದು ಪತ್ತೆ ಹಚ್ಚಲು ಅವರ ಗಂಟಲು ದ್ರವ ಮಾದರಿಯನ್ನು ಬೆಂಗಳೂರಿನ ನಿಮ್ಹಾನ್ಸ್ನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ'' ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅನಂತ ದೇಸಾಯಿ ತಿಳಿಸಿದ್ದಾರೆ.
ಜಮಖಂಡಿ ತಾಲ್ಲೂಕಿನ ಹಳ್ಳಿಯೊಂದರಲ್ಲಿರುವ ತನ್ನ ಪತಿಯ ಮನೆಗೆ ಲಂಡನ್ನಿಂದ ಆಗಮಿಸಿದ್ದ 32 ವರ್ಷದ ಮಹಿಳೆಯ ಅತ್ತೆಗೆ ಕೊರೊನಾ ದೃಢಪಟ್ಟಿದ್ದು ಇನ್ನೊಂದು ಪ್ರಕರಣದಲ್ಲಿ ಡಿಸೆಂಬರ್ 10ರಂದು ಲಂಡನ್ನಿಂದ ಇಳಕಲ್ಗೆ ಆಗಮಿಸಿದ ಯುವಕನ 27 ವರ್ಷದ ಸಹೋದರಿಗೆ ಕೊರೊನಾ ದೃಢಪಟ್ಟಿದೆ.
32 ವರ್ಷದ ಮಹಿಳೆಯು ಡಿಸೆಂಬರ್ 21ರಂದು ಬೆಳಗಾವಿಯ ಖಡೇಬಜಾರ್ನಲ್ಲಿರುವ ತವರು ಮನೆಗೆ ತೆರಳಿದ್ದು ಕೊರೊನಾ ನೆಗೆಟಿವ್ ಆಗಿದೆ. ಸದ್ಯ ಮಹಿಳೆ ಕ್ವಾರಂಟೈನ್ನಲ್ಲಿದ್ದಾರೆ. ಕುಟುಂಬಸ್ಥರ ಕೊರೊನಾ ಪರೀಕ್ಷೆ ನಡೆಸಿದಾಗ ಆಕೆಯ 70 ವರ್ಷದ ಅತ್ತೆಗೆ ಸೋಂಕು ದೃಢಪಟ್ಟಿದೆ. ಇನ್ನು ಡಿಸೆಂಬರ್ 10ರಂದು ಲಂಡನ್ನಿಂದ ಇಳಕಲ್ಗೆ ಮರಳಿದ್ದ ಯುವಕನ ಸಹೋದರಿಗೂ ಕೊರೊನಾ ಪಾಸಿಟಿವ್ ಆಗಿದೆ.
''ಪ್ರಸ್ತುತ ಇಬ್ಬರನ್ನೂ ಬಾಗಲಕೋಟೆಯ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ'' ಎಂದು ಡಿಎಚ್ಒ ತಿಳಿಸಿದ್ದಾರೆ.