ಬೆಂಗಳೂರು, ಡಿ.24 (DaijiworldNews/MB) : ರಾಜ್ಯ ಸರ್ಕಾರ ರಾತ್ರಿ ಕರ್ಪ್ಯೂ ಜಾರಿ ಮಾಡಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ''ಹಗಲಲ್ಲಿ ಕೊರೊನಾ ಸೋಂಕು ಹರಡುವುದಿಲ್ಲವೇ'' ಎಂದು ಪ್ರಶ್ನಿಸಿದರು.
ಗುರುವಾರ ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ''ರಾಜ್ಯ ಸರ್ಕಾರ ತನಗೆ ಬೇಕಾದಂತೆ ತೀರ್ಮಾನ ತೆಗೆದುಕೊಳ್ಳುತ್ತದೆ. ರಾತ್ರಿ ಕರ್ಪ್ಯೂ ಜಾರಿ ಮಾಡಿದ್ದಾರೆ. ಹಗಲಿನಲ್ಲಿ ಎಲ್ಲ ತೆರೆದು ರಾತ್ರಿ ಕರ್ಪ್ಯೂ ಜಾರಿ ಮಾಡುವುದರಿಂದ ಆಗುವ ಪ್ರಯೋಜನವಾದರೂ ಏನು'' ಎಂದು ಕೇಳಿದರು.
''ಹಗಲಲ್ಲಿ ಸಾವಿರಾರು ಜನರು ಸೇರುತ್ತಾರೆ. ಆಗ ಕೊರೊನಾ ಹರಡುದಿಲ್ಲವೇ'' ಎಂದು ಪ್ರಶ್ನಿಸಿರುವ ಡಿಕೆಶಿ, ''ಒಂದು ವರ್ಗಕ್ಕೆ ತೊಂದರೆಯಾಗಬೇಕು ಎಂಬ ಉದ್ದೇಶಕ್ಕೆ ನಿಯಮಗಳನ್ನು ಜಾರಿಗೆ ತರಬಾರದು'' ಎಂದು ಹೇಳಿದರು.
''ಸರ್ಕಾರ ಪ್ರತಿನಿಧಿಗಳು ತಮ್ಮ ವೈಫಲ್ಯ ಮುಚ್ಚೋದಕ್ಕೆ ಜನರನ್ನು ಬೇರೆ ಬೇರೆ ವಿಚಾರದ ಕಡೆ ಸೆಳೆಯುತ್ತಿದ್ದಾರೆ. ಹಗಲು ಸಂಚರಿಸಬಹುದು, ರಾತ್ರಿ ಹೊತ್ತು ಕರ್ಫ್ಯೂ ಮಾಡುವುದೇಕೆ. ಇದರಿಂದಾಗಿ ಸೋಂಕು ನಿಯಂತ್ರಣವಾಗುತ್ತದೆಯೇ? ಅಷ್ಟಕ್ಕೂ ಈ ಬಗ್ಗೆ ಸರ್ಕಾರ ಯಾರೊಂದಿಗೆ ಚರ್ಚೆ ನಡೆಸಿದೆ. ಸೋಂಕು ರಾತ್ರಿಯಲ್ಲೇ ಹರಡುತ್ತೇ ಎಂಬುದಕ್ಕೆ ಯಾವುದಾದರೂ ಸಾಕ್ಷಿ, ದಾಖಲೆಯಿದೆಯೇ'' ಎಂದು ಸರ್ಕಾರದ ಕ್ರಮವನ್ನು ಟೀಕಿಸಿದರು.
ಇನ್ನು, ''ನೀವು ಎಲ್ಲಿ ಕೊರೊನಾ ನಿಯಂತ್ರಣ ಮಾಡಿದ್ದೀರಿ'' ಎಂದು ಸರ್ಕಾರಕ್ಕೆ ಕೇಳಿರುವ ಅವರು, ''ಸುಮ್ಮನೇ ವಿರೋಧ ಪಕ್ಷದ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುವುದಲ್ಲ. ಮೊದಲು ಅಧಿವೇಶನ ಕರೆಯಿರಿ. ಎಲ್ಲರೂ ಚರ್ಚಿಸೋಣ'' ಎಂದು ಹೇಳಿದರು.
''ಬಿಜೆಪಿಯವರು ಸರ್ಕಾರವನ್ನು ತಮ್ಮ ಖಾಸಗೀ ಆಸ್ತಿ ಅಂದುಕೊಂಡಿದ್ದಾರೆ'' ಎಂದು ಸಿಡಿಮಿಡಿಗೊಂಡ ಅವರು, ''ಈ ನಿರ್ಧಾರಕ್ಕೂ ಮುನ್ನಾ ಯಾರನ್ನಾದರೂ ಕರೆದು ಮಾತುಕತೆ ನಡೆಸಿದ್ದೀರಾ? ಯಾರದಾದರೂ ಸಲಹೆ ಪಡೆದಿದ್ದೀರಾ?'' ಎಂದು ಪ್ರಶ್ನಿಸಿದರು.
''ಸುಧಕಾರ್ ಆಗಲಿ ಬೇರೆ ಯಾರೇ ಆಗಲಿ, ನಾನು ಅವರ ಹೇಳಿಕೆಗಳಿಗೆ ಉತ್ತರ ನೀಡಲ್ಲ.ಕೊರೊನಾ ಸಂದರ್ಭ ನಾವು ಸಹಕರಿಸಿಲ್ಲ ಎಂದು ಮುಖ್ಯಮಂತ್ರಿ ಹೇಳಲಿ ನೋಡೋಣಾ. ನಾವು ಅವರ ಭ್ರಷ್ಟಾಚಾರಗಳಿಗೆ ಸಹಕರಿಸಬೇಕಾ? ಇವರು ಪ್ರಚಾರಕ್ಕೆ ಬೇಕಾಗಿ ಬಾಯಿಗೆ ಬಂದಂತೆ ಹೇಳಿಕೆ ನೀಡುತ್ತಲ್ಲೇ ಇರುತ್ತಾರೆ'' ಎಂದು ದೂರಿದರು.