ವಿಜಯಪುರ, ಡಿ.24 (DaijiworldNews/PY): "ಹೊಸ ರೀತಿಯ ಕೊರೊನಾ ಹಿನ್ನೆಲೆ ರಾಜ್ಯದಲ್ಲಿ ಕರ್ಫ್ಯೂ ಜಾರಿ ಮಾಡಿರುವ ಹಿನ್ನೆಲೆ ವಿರೋಧ ವ್ಯಕ್ತಪಡಿಸಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ, ರಾತ್ರಿ ಕರ್ಫ್ಯೂಗೆ ಅರ್ಥವೇ ಇಲ್ಲ" ಎಂದಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರಾತ್ರಿ ಕರ್ಫ್ಯೂ ವಿಧಿಸುವುದು ಸಾರ್ವಜನಿಕರ ಹಾಗೂ ಪೊಲೀಸರ ನಡುವೆ ಜಗಳಕ್ಕೆ ಜಾರಣವಾಗುತ್ತಿದೆ. ಈ ರೀತಿಯಾದ ಕಿರಿಕಿರಿಗಳಿಗೆ ಅವಕಾಶವನ್ನು ನೀಡಉವ ಹಾಗೂ ಅರ್ಧಂಬರ್ಧ ತೀರ್ಮಾನವನ್ನು ಮಾಡದೇ ರಾತ್ರಿ ಹೇರಲಾಗಿರುವ ಕರ್ಫ್ಯೂ ತೆಗೆದುಹಾಕಬೇಕು" ಎಂದು ಹೇಳಿದ್ದಾರೆ.
"ರಾತ್ರಿ ಕರ್ಫ್ಯೂ ಹೇರುವುದರಿಂದ ಯಾವುದೇ ಪ್ರಯೋಜನವಾಗುದಿಲ್ಲ. ಏಕೆಂದರೆ ರಾತ್ರಿ 11ರಿಂದ ಬೆಳಗ್ಗೆ 6 ಗಂಟೆಯವರೆಗೆ ಬಹುತೇಕ ಮಂದಿ ಮನೆಯಲ್ಲೇ ಇರುತ್ತಾರೆ. ಅಲ್ಲದೇ, ಕೊರೊನಾ ರಾತ್ರಿ ಹೆಚ್ಚಾಗುತ್ತದೋ ಅಥವಾ ಬೆಳಗ್ಗೆ ಹೆಚ್ಚಾಗುತ್ತಿದೋ ಎನ್ನುವ ವಿಚಾರ ನಮಗೂ ಕೂಡಾ ತಿಳಿದಿಲ್ಲ. ಈ ಬಗ್ಗೆ ವೈದ್ಯಕೀಯ ಸಲಹೆ ಪಡೆದು ತೀರ್ಮಾನ ಕೈಗೊಳ್ಳಬೇಕು" ಎಂದಿದ್ದಾರೆ.
"ಸಿಎಂ ಅವರು ಒಂದೆಡೆ ಕ್ರಿಸ್ಮಸ್ನ ಎಲ್ಲಾ ಕಾರ್ಯಕ್ರಮಗಳಿಗೂ ಕೂಡಾ ಅನುಮತಿ ನೀಡುವುದಾಗಿ ಗೊಂದಲದ ಹೇಳಿಕೆಯನ್ನು ಕೊಟ್ಟಿದ್ದಾರೆ. ತಕ್ಷಣವೇ ಅವರು ರಾತ್ರಿ ಕರ್ಫ್ಯೂ ಬಗ್ಗೆ ಮರುಪರಿಶೀಲಿಸಬೇಕು" ಎಂದು ತಿಳಿಸಿದ್ದಾರೆ.