ಬೆಂಗಳೂರು, ಡಿ.24 (DaijiworldNews/PY): "ಸಿಎಂ ಸ್ಥಾನಕ್ಕೆ ತಕ್ಷಣವೇ ಬಿ.ಎಸ್.ಯಡಿಯೂರಪ್ಪ ಅವರು ರಾಜೀನಾಮೆ ನೀಡಬೇಕು. ಇಲ್ಲವಾದಲ್ಲಿ ಕಾಂಗ್ರೆಸ್ ಬೀದಿಗಿಳಿದು ಹೋರಾಟ ಮಾಡಲಿದೆ" ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.
ವಿಧಾನಸೌಧದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜೊತೆಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, "ಅಕ್ರಮವಾಗಿ ಡಿನೋಟಿಫಿಕೇಷನ್ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಸಿಎಂ ಬಿ.ಎಸ್.ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿ ಹೈಕೋಟ್ನಲ್ಲಿ ವಜಾಗೊಂಡ ಕಾರಣ ತಮ್ಮ ಸ್ಥಾನಕ್ಕೆ ಸಿಎಂ ಬಿಎಸ್ವೈ ಅವರು ಕೂಡಲೇ ರಾಜೀನಾಮೆ ನೀಡಬೇಕು" ಎಂದು ಆಗ್ರಹಿಸಿದ್ದಾರೆ.
"ಯಡಿಯೂರಪ್ಪ ಅವರು ರಾಜೀನಾಮೆ ನೀಡಿ ಸುಪ್ರೀಂ ಕೋರ್ಟ್ಗೆ ಹೋಗಿ ಕ್ಲೀನ್ ಚಿಟ್ ಪಡೆದುಕೊಂದು ಪುನಃ ಸಿಎಂ ಆಗಲಿ. ಇಲ್ಲದಿದ್ದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ ನಾ ಖಾವುಂಗ ನಾ ಖಾನೆ ದೂಂಗಾ ಎನ್ನುವ ಮಾತಿಗೆ ಅರ್ಥವೆಲ್ಲಿದೆ?. ತಮ್ಮ ಸ್ಥಾನಕ್ಕೆ ಯಡಿಯೂರಪ್ಪ ಅವರು ರಾಜೀನಾಮೆ ನೀಡದೇ ಇದ್ದಲ್ಲಿ ನರೇಂದ್ರ ಮೋದಿ ಅವರೇ ರಾಜೀನಾಮೆ ಪಡೆಯಬೇಕು" ಎಂದಿದ್ದಾರೆ.
2019ರಲ್ಲಿ ಯಡಿಯೂರಪ್ಪ ಅವರು, ತಮ್ಮ ವಿರುದ್ದದ ಲೋಕಾಯುಕ್ತ ಪೊಲೀಸರು ದಾಖಲಿಸಿರುವ ಎಫ್ಐಆರ್ ಹಾಗೂ ಈ ವಿಚಾರದ ಸಂಬಂಧ ನಡೆದಿರುವ ಲೋಕಾಯುಕ್ತ ಕೋರ್ಟ್ ವಿಚಾರಣೆಯನ್ನು ರದ್ದು ಮಾಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಈ ತಕರಾರು ಅರ್ಜಿಯನ್ನು ನ್ಯಾ.ಜಾನ್ ಮೈಕೆಲ್ ಕುನ್ಹಾ ಅವರಿದ್ದ ಏಕ ಸದಸ್ಯ ಪೀಠವು ವಜಾಗೊಳಿಸಿತ್ತು.