ಮಂಗಳೂರು, ಡಿ.24 (DaijiworldNews/MB) : ಬುಧವಾರ ಮಾಜಿ ಸಚಿವ ಯು.ಟಿ.ಖಾದರ್ ಅವರ ಕಾರನ್ನು ಅಪರಿಚಿತರು ಹಿಂಬಾಲಿಸಿಕೊಂಡು ಬಂದಿರುವ ಘಟನೆಗೆ ಸಂಬಂಧಿಸಿ ಮಂಗಳೂರಿನಲ್ಲಿ ಓರ್ವ ಶಂಕಿತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ಪೊಲೀಸರು ಅನೀಶ್ ಪೂಜಾರಿ (28) ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಬುಧವಾರ ರಾತ್ರಿ 7.45ರ ಸುಮಾರಿಗೆ ಶಾಸಕ ಖಾದರ್ ಅವರು ದೇರಳಕಟ್ಟೆಯಲ್ಲಿ ಕಾರ್ಯಕ್ರಮವೊಂದನ್ನು ಮುಗಿಸಿ ಬಳಿಕ ಬೆಂಗಳೂರಿಗೆ ಹೋಗಲು ವಿಮಾನ ನಿಲ್ದಾಣದತ್ತ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ಸಂದರ್ಭ ದೇರಳಕಟ್ಟೆ ಬಳಿಕ ಬೈಕೊಂದು ಖಾದರ್ ಅವರಿದ್ದ ಕಾರಿನ ಸಮೀಪ ಎರಡು ಬಾರಿ ಸಂಶಯಾಸ್ಪದವಾಗಿ ಸಂಚರಿಸಿದೆ. ಈ ಬಗ್ಗೆ ಅನುಮಾನಗೊಂಡ ಶಾಸಕ ಖಾದರ್ ಅವರು ಎಸ್ಕಾರ್ಟ್ ವಾಹನದ ಎಎಸ್ಸೈ ಸುಧೀರ್ ಮಾಹಿತಿ ನೀಡಿದ್ದರು.
ಕೂಡಲೇ ಪೊಲೀಸರು ಬೈಕ್ನವರನ್ನು ವಶಕ್ಕೆ ಪಡೆಯಲು ಮುಂದಾದಾಗ ಬೈಕ್ನಲ್ಲಿದ್ದವರು ಪರಾರಿಯಾಗಿದ್ದಾರೆ. ಇನ್ನು ಈ ವೇಳೆ ಪೊಲೀಸರು ಬೈಕ್ ನಂಬರ್ ನೋಟ್ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ.
ಇನ್ನು ಅನೀಶ್ ಪೂಜಾರಿ ದೇರಳಕಟ್ಟೆಯಲ್ಲಿ ಕೆಲಸ ಮುಗಿಸಿ ಉರ್ವಾದತ್ತ ಇರುವ ತನ್ನ ನಿವಾಸದೆಡೆ ಬೈಕ್ನಲ್ಲಿ ತೆರಳುತ್ತಿದ್ದ. ಆದರೆ ಆತ ಸಚಿವರನ್ನು ಹಿಂಬಾಲಿಸಿಲ್ಲ. ಅವನಿಗೆ ಬೇರೆ ಉದ್ದೇಶವಿದ್ದಂತೆ ಕಾಣುತ್ತಿಲ್ಲ ಎಂದು ಕೂಡಾ ಹೇಳಲಾಗಿದೆ.