ನವದೆಹಲಿ, ಡಿ.24 (DaijiworldNews/MB) : ''ಪ್ರಜಾಪ್ರಭುತ್ವ ದೇಶದಲ್ಲಿ ಅಸ್ತಿತ್ವದಲ್ಲಿಲ್ಲ, ಅಸಮರ್ಥ ನಾಯಕರೊಬ್ಬರು ಭಾರತವನ್ನು ಮುನ್ನಡೆಸುತ್ತಿದ್ದಾರೆ'' ಎಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ 29 ದಿನಗಳಿಂದ ರೈತರು ರಾಷ್ಟ್ರ ರಾಜಧಾನಿಯ ಗಡಿ ಭಾಗಗಳಲ್ಲಿ ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆ ರದ್ದತಿಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಲ್ಲಿದ್ದಾರೆ. ಈ ನಿಟ್ಟಿನಲ್ಲಿ ರಾಷ್ಟ್ರಪತಿ ಕೋವಿಂದ್ ಈ ಸಮಸ್ಯೆಗೆ ಮಧ್ಯಪ್ರವೇಶ ಮಾಡಬೇಕು ಎಂದು ಒತ್ತಾಯಿಸಿರುವ ಕಾಂಗ್ರೆಸ್ನ ನಿಯೋಗವು ಗುರುವಾರ ರಾಷ್ಟ್ರ ಭವನದತ್ತ ಕಾಲ್ನಾಡಿಗೆ ಮೆರವಣಿಗೆಯನ್ನು ಆಯೋಜಿಸಿತ್ತು. ಹಾಗೆಯೇ ಈ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಸಂಗ್ರಹಿಸಿದ ಎರಡು ಕೋಟಿ ಹಸ್ತಾಕ್ಷರವಿರುವ ಪತ್ರವನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಸಲ್ಲಿಸಲು ಕಾಂಗ್ರೆಸ್ ತೀರ್ಮಾನಿಸಿತ್ತು. ಆದರೆ ಕಾಂಗ್ರೆಸ್ ಪಾದಯಾತ್ರೆಗೆ ಪೊಲೀಸ್ ಅನುಮತಿ ನೀಡಿರಲಿಲ್ಲ.ಪೊಲೀಸರು ಕಾಂಗ್ರೆಸ್ನ ಈ ನಿಯೋಗವನ್ನು ತಡೆದಿದ್ದು ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಪಕ್ಷದ ಮುಖಂಡರನ್ನು ವಶಕ್ಕೆ ಪಡೆದಿದ್ದಾರೆ. ಅನುಮತಿ ಪಡೆದ ನಾಯಕರಿಗೆ ಮಾತ್ರ ರಾಷ್ಟ್ರಪತಿ ಭವನಕ್ಕೆ ಹೋಗಲು ಅವಕಾಶ ನೀಡಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.
ಪೊಲೀಸರ ಈ ಕೃತ್ಯವನ್ನು ಖಂಡಿಸಿರುವ ರಾಹುಲ್ ಗಾಂಧಿ, ''ದೇಶದಲ್ಲಿ ಪ್ರಜಾಪ್ರಭುತ್ವವೇ ಅಸ್ತಿತ್ವದಲ್ಲಿಲ್ಲ'' ಎಂದು ಹೇಳಿದ್ದಾರೆ.
ರಾಷ್ಟ್ರಪತಿ ಭವನಕ್ಕೆ ತೆರಳಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡುವ ಅವಕಾಶವು ಕಾಂಗ್ರೆಸ್ನ ಮೂವರು ಮುಖಂಡರಿಗೆ ಮಾತ್ರ ದೊರೆತಿದ್ದು ಈ ಸಂದರ್ಭ ಕೃಷಿ ಕಾನೂನು ರದ್ದುಗೊಳಿಸುವಂತೆ ಆಗ್ರಹಿಸಿ ಎರಡು ಕೋಟಿ ಹಸ್ತಾಕ್ಷರವಿರುವ ಪತ್ರವನ್ನು ರಾಷ್ಟ್ರಪತಿಗೆ ರಾಹುಲ್ ಗಾಂಧಿ ಸಲ್ಲಿಸಿದ್ದಾರೆ.
''ಈ ಕಾಯ್ದೆಗಳು ಕೃಷಿ ವಿರೋಧಿ ಎಂದು ರಾಷ್ಟ್ರಪತಿಗೆ ಮನವರಿಕೆ ಮಾಡಿದ್ದೇನೆ. ಈ ಕಾಯ್ದೆ ರದ್ದು ಪಡಿಸುವವರೆಗೂ ನಾನೂ ಮನೆಗೆ ವಾಪಾಸ್ ಹೋಗಲಾರೆ ಎಂದು ಪ್ರಧಾನಿಗೆ ನಾನು ಕೂಡಾ ಹೇಳಲು ಇಚ್ಛಿಸುತ್ತೇನೆ'' ಎಂದು ಹೇಳಿದರು.
''ಪ್ರಧಾನಿ ಬಂಡವಾಳಶಾಹಿಗಳ ಪರವಾಗಿದ್ದಾರೆ. ಸರ್ಕಾರದ ವಿರುದ್ದವಿರುವವರಿಗೆ ಭಯೋತ್ಪಾದಕ ಎಂಬ ಹಣೆಪಟ್ಟಿ ಕಟ್ಟುತ್ತಾರೆ. ಅವರು ಶಾಂತಿಯಾಗಿ ಪ್ರತಿಭಟನೆ ನಡೆಸುತ್ತಿದ್ದರೂ ಲಾಠಿ ಬೀಸುತ್ತಾರೆ'' ಎಂದು ಹೇಳಿದರು.
''ಚೀನಾವು ಗಡಿಯಲ್ಲಿ ಭಾರತದ ಸಾವಿರಾರು ಕಿ.ಮೀ. ಭೂಮಿಯನ್ನು ವಶಕ್ಕೆ ಪಡೆದಿದೆ. ಪ್ರಧಾನಿ ಅದರ ಬಗ್ಗೆ ಏಕೆ ಮಾತನಾಡಲ್ಲ?. ಏನು ತಿಳಿಯದ ಅಸಮರ್ಥ ವ್ಯಕ್ತಿ ವ್ಯವಸ್ಥೆಯನ್ನು ಮುನ್ನಡೆಸುತ್ತಿದ್ದಾರೆ'' ಎಂದು ಮೋದಿ ವಿರುದ್ದ ಕಿಡಿಕಾರಿದರು.