ಮೈಸೂರು, ಡಿ.24 (DaijiworldNews/PY): "ಜ.1ರಿಂದ ಶಾಲಾರಂಭ ಬೇಡ. ಜೀವದ ಜೊತೆ ಚೆಲ್ಲಾಟವಾಡುವುದು ಸರಿಯಲ್ಲ" ಎಂದು ವಿಧಾನಪರಿಷತ್ ಬಿಜೆಪಿ ಸದಸ್ಯ ಎ.ಎಚ್.ವಿಶ್ವನಾಥ್ ಹೇಳಿದರು.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಂಕ್ರಾಂತಿ ಮುಗಿದ ನಂತರ ಶಾಲಾರಂಭ ಮಾಡುವುದು ಉತ್ತಮ. ಪೋಷಕರನ್ನು ಹಾಗೂ ಮಕ್ಕಳಿಗೆ ಆತಂಕ ಉಂಟಾಗುವುದು ಬೇಡ" ಎಂದರು.
"ಮಕ್ಕಳು ಮನೆಯ ಆಸ್ತಿ. ಜ.1ರಿಂದ ಶಾಲಾರಂಭ ಮಾಡುವುದು ಬೇಡ. ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ಹೇಳಿದ್ದ ಯಾವುದಾದರೂ ಒಂದು ವಿಷಯ ಸರಿಯಾಗಿ ಅಗಿದೆಯಾ?. ಅವರಿಗೆ ಆಡಿದ ಮಾತನ್ನು ಪುನಃ ತೆಗೆದುಕೊಳ್ಳುವ ಖಾಯಿಲೆ ಇದ್ದಂತಿದೆ" ಎಂದರು.
ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, "ಕೊಡವರು ಹಸುವನ್ನು ಪೂಜೆ ಮಾಡುತ್ತಾರೆ. ಆದರೆ ಕೊಡವರು ಬೀಫ್ ತಿನ್ನುತ್ತಾರೆ ಎಂದು ಸಿದ್ದರಾಮಯ್ಯ ಹೇಳಿ ಕೊಡವರಿಗೆ ಅವಮಾನ ಮಾಡಿದ್ದಾರೆ. ಸಿದ್ದರಾಮಯ್ಯ ಅವರ ಈ ಹೇಳಿಕೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮುಗಿಸುವ ಹುನ್ನಾರವಿದೆ" ಎಂದು ಹೇಳಿದರು.
ನೈಟ್ ಕರ್ಫ್ಯೂ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಸರ್ಕಾರದ ಪರವಾಗಿ ನಾನು ಇದನ್ನು ಸರಿಯಾಗಿದೆ ಎಂದು ಹೇಳಬಹುದು. ಆದರೆ, ರಾಜ್ಯದ ಜನರು ಈ ವಿಚಾರವನ್ನು ತಮಾಷೆಯ ರೀತಿಯಲ್ಲಿ ಸ್ವೀಕರಿಸಿದ್ದಾರೆ. ಈ ಬಗ್ಗೆ ಸರ್ಕಾರ ಪುನರ್ ವಿಮರ್ಶೆ ಮಾಡುವುದು ಸೂಕ್ತ" ಎಂದರು.
"ಕೆಲವು ತೀರ್ಮಾನಗಳನ್ನು ಸರ್ಕಾರ ಯೋಚಿಸಿ ತೆಗೆದುಕೊಳ್ಳಬೇಕು, ನೈಟ್ ಕರ್ಫ್ಯೂನಿಂದ ಯಾವುದೇ ರೀತಿಯಾದ ಪ್ರಯೋಜನವಿಲ್ಲ" ಎಂದು ಹೇಳಿದರು.