ನವದೆಹಲಿ, ಡಿ.24 (DaijiworldNews/MB) : ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಗುರುವಾರ ಕಾಂಗ್ರೆಸ್ ಆಯೋಜಿಸಿದ್ದ ರಾಷ್ಟ್ರಪತಿ ಭವನದತ್ತ ರ್ಯಾಲಿಯನ್ನು ಪೊಲೀಸರು ತಡೆದಿದ್ದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಪ್ರಮುಖ ನಾಯಕರನ್ನು ವಶಕ್ಕೆ ಪಡೆದಿದ್ದಾರೆ.
ಕಳೆದ 29 ದಿನಗಳಿಂದ ರೈತರು ರಾಷ್ಟ್ರ ರಾಜಧಾನಿಯ ಗಡಿ ಭಾಗಗಳಲ್ಲಿ ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆ ರದ್ದತಿಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಲ್ಲಿದ್ದಾರೆ. ಈ ನಿಟ್ಟಿನಲ್ಲಿ ರಾಷ್ಟ್ರಪತಿ ಕೋವಿಂದ್ ಈ ಸಮಸ್ಯೆಗೆ ಮಧ್ಯಪ್ರವೇಶ ಮಾಡಬೇಕು ಎಂದು ಒತ್ತಾಯಿಸಿರುವ ಕಾಂಗ್ರೆಸ್ನ ನಿಯೋಗವು ಗುರುವಾರ ರಾಷ್ಟ್ರ ಭವನದತ್ತ ಕಾಲ್ನಾಡಿಗೆ ಮೆರವಣಿಗೆಯನ್ನು ಆಯೋಜಿಸಿತ್ತು. ಹಾಗೆಯೇ ಈ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಸಂಗ್ರಹಿಸಿದ ಎರಡು ಕೋಟಿ ಹಸ್ತಾಕ್ಷರವಿರುವ ಪತ್ರವನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಸಲ್ಲಿಸಲು ಕಾಂಗ್ರೆಸ್ ತೀರ್ಮಾನಿಸಿತ್ತು. ಆದರೆ ಕಾಂಗ್ರೆಸ್ ಪಾದಯಾತ್ರೆಗೆ ಪೊಲೀಸ್ ಅನುಮತಿ ನೀಡಿರಲಿಲ್ಲ.
ಪೊಲೀಸರು ಕಾಂಗ್ರೆಸ್ನ ಈ ನಿಯೋಗವನ್ನು ತಡೆದಿದ್ದು ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಪಕ್ಷದ ಮುಖಂಡರನ್ನು ವಶಕ್ಕೆ ಪಡೆದಿದ್ದಾರೆ.
ಅನುಮತಿ ಪಡೆದ ನಾಯಕರಿಗೆ ಮಾತ್ರ ರಾಷ್ಟ್ರಪತಿ ಭವನಕ್ಕೆ ಹೋಗಲು ಅವಕಾಶ ನೀಡಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.
ಇನ್ನು ಈ ಸಂದರ್ಭದಲ್ಲಿ ಮಾತನಾಡಿರುವ ಪ್ರಿಯಾಂಕಾ ಗಾಂಧಿ ವಾದ್ರಾ, ''ರೈತರು ಎಂದಿಗೂ ಹಿಂಜರಿಯುವುದಿಲ್ಲ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಅರ್ಥೈಸಿಕೊಳ್ಳಬೇಕು. ಸರ್ಕಾರದ ವಿರುದ್ದ ನಡೆದ ಎಲ್ಲಾ ಪ್ರತಿಭಟನೆಗಳನ್ನು ಭಯೋತ್ಪಾದಕ ಕೃತ್ಯ ಎನ್ನಲಾಗುತ್ತಿದೆ. ನಾವು ರೈತರಿಗೆ ಬೆಂಬಲ ಸೂಚಿಸಲು ಈ ಮೆರವಣಿಗೆ ಹಮ್ಮಿಕೊಂಡಿದ್ದೇವೆ'' ಎಂದು ಹೇಳಿದ್ದಾರೆ.