ನವದೆಹಲಿ, ಡಿ.24 (DaijiworldNews/PY): "ಭಾರತದ ಸ್ವಾತಂತ್ರ್ಯ ಸಂಗ್ರಾಮದ ಬೇರು ಭಕ್ತಿ ಚಳುವಳಿಯಲ್ಲಿವೆ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಗುರುವಾರ ಪಶ್ಚಿಮ ಬಂಗಾಳದ ಶಾಂತಿನಿಕೇತನದಲ್ಲಿ ವಿಶ್ವ ಭಾರತಿ ವಿಶ್ವವಿದ್ಯಾಲಯದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿದ ಅವರು, "ಈ ದೇಶದಲ್ಲಿ ನೂರಾರು ವರ್ಷಗಳ ಕಾಲ ನಡೆದ ಭಕ್ತಿ ಚಳವಳಿಯೊಂದಿಗೆ ಕರ್ಮ ಚಳವಳಿಯೂ ಕೂಡಾ ನಡೆದಿದೆ. ಹಲವಾರು ವರ್ಷಗಳ ತನಕ ಭಾರತೀಯರು ಗುಲಾಮಗಿರಿಯ ವಿರುದ್ದ ಹೋರಾಟ ನಡೆಸಿದ್ದಾರೆ" ಎಂದರು.
"ವಿಶ್ವ ಭಾರತಿ ವಿಶ್ವ ವಿದ್ಯಾಲಯವು ದೇಶಕ್ಕೆ ಶಕ್ತಿ ತುಂಬುವಂತ ಕೇಂದ್ರವಾಗಿದೆ. ಅಲ್ಲದೇ, ಇದು ರವೀಂದ್ರ ನಾಥ್ ಠಾಗೋರ್ ಅವರ ಕಠಿಣ ಪರಿಶ್ರಮದ ಸಮ್ಮಿಶ್ರವಾಗಿದೆ" ಎಂದು ಹೇಳಿದರು.
"ವಿಶ್ವ ಭಾರತಿ ವಿಶ್ವ ವಿದ್ಯಾಲಯವು ಠಾಗೋರ್ ಅವರ ಮಾರ್ಗದರ್ಶನದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭ ಭಾರತೀಯರ ಮನೋಧರ್ಮವನ್ನು ಅಚ್ಚಳಿಯದಂತೆ ಮಾಡಿದೆ. ಠಾಗೋರ್ ಅವರು ಇಡೀ ಮಾನವ ಕುಲಕ್ಕೆ ಭಾರತದ ಧಾರ್ಮಿಕ ಪ್ರಜ್ಞಾವಂತಿಕೆಯ ಪ್ರಯೋಜನ ದೊರಕುವಂತಾಗಲು ಇಚ್ಛಿಸಿದ್ದರು. ಈ ಮನೋಧರ್ಮದಿಂದ ಆತ್ಮನಿರ್ಭರ ಭಾರತ ದೃಷ್ಟಿಕೋನವನ್ನು ಪಡೆದುಕೊಳ್ಳಲಾಗಿದೆ" ಎಂದು ತಿಳಿಸಿದರು.