ಮುಂಬೈ,ಡಿ.24 (DaijiworldNews/HR): "ಈ ಹಿಂದೆ ನಾನು ಕಾಂಗ್ರೆಸ್ ಪಕ್ಷದಲ್ಲಿದ್ದೆ ಎಂಬ ಬೇಸರ ನನಗಿಲ್ಲ, ಆ ಪಕ್ಷದ ನಾಯಕತ್ವದ ಬಗ್ಗೆ ನನಗೆ ಗೌರವವಿದೆ" ಎಂದು ಬಾಲಿವುಡ್ ನಟಿ, ಶಿವಸೇನಾ ನಾಯಕಿ ಊರ್ಮಿಳಾ ಮಾತೋಂಡ್ಕರ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರ ಉತ್ತಮವಾಗಿ ಕಾರ್ಯ ನಿರ್ವಹಿಸಿದೆ, ಕೊರೊನಾದಂತಹ ಕಷ್ಟದ ಪರಿಸ್ಥಿತಿಯಲ್ಲಿ ಕೂಡ ಜನರ ಬಗ್ಗೆ ಕಾಳಜಿ ವಹಿಸಿದೆ" ಎಂದರು.
ಇನ್ನು "ನಾನು ಜನರ ನಟಿಯಾಗಿದ್ದೆ, ಈಗ ಜನರ ರಾಜಕಾರಣಿಯಾಗಲು ಪರಿಶ್ರಿಮಿಸುತ್ತೇನೆ. ನಾನು ಕೇವಲ ಎ.ಸಿ ಕೊಠಡಿಯೊಳಗೆ ಕುಳಿತುಕೊಂಡು ಟ್ವೀಟ್ ಮಾಡುವಂತಹ ನಾಯಕಿಯಾಗಲು ಬಯಸುವುದಿಲ್ಲ, ನನಗೆ ಯಾವ ಕೆಲಸ ಮಾಡಬೇಕು ಮತ್ತು ಆ ಕೆಲಸವನ್ನು ಹೇಗೆ ಮಾಡಬೇಕು ಎಂಬುದರ ಬಗ್ಗೆ ತಿಳಿದಿದೆ" ಎಂದು ಹೇಳಿದ್ದಾರೆ.
2019ರಲ್ಲಿ ಲೋಕಸಭಾ ಚುನಾವಣೆ ವೇಳೆ ಊರ್ಮಿಳಾ ಅವರು ಕಾಂಗ್ರೆಸ್ನಿಂದ ಉತ್ತರ ಮುಂಬೈ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದು, ಅದರಲ್ಲಿ ಗೆಲುವು ಸಾಧಿಸಲಿಲ್ಲ. ಬಳಿಕ ಡಿಸೆಂಬರ್ 1 ರಂದು ಕಾಂಗ್ರೆಸ್ ತೊರೆದು, ಶಿವಸೇನಾಗೆ ಸೇರ್ಪಡೆಯಾದರು.