ಮೈಸೂರು, ಡಿ.24 (DaijiworldNews/PY): "ಸ್ವಪಕ್ಷದವರೇ ನನ್ನ ಬೆನ್ನಿಗೆ ಚೂರಿ ಹಾಕಿದರು. ಸ್ವಪಕ್ಷದ ಒಳಸಂಚಿನ ಕಾರಣ ನಾನು ಸೋಲು ಕಾಣಬೇಕಾಯಿತು" ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
"ಸ್ವಪಕ್ಷದ ಒಳಸಂಚಿನ ಕಾರಣ ನಾನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲು ಕಾಣಬೇಕಾಯಿತು. ಆದರೆ, ಬಾದಾಮಿಯಲ್ಲಿ ಹಾಗಾಗಲಿಲ್ಲ. ಬಾದಾಮಿ ಜನ ನನಗೆ ಬೆಂಬಲ ನೀಡಿದರು. ಒಂದು ವೇಳೆ ಬಾದಾಮಿಯಲ್ಲೂ ಕೂಡಾ ನಾನು ಸೋಲುತ್ತಿದ್ದರೆ, ನನ್ನ ರಾಜಕೀಯ ಭವಿಷ್ಯ ಏನಾಗುತ್ತಿತ್ತು ಗೊತ್ತಿಲ್ಲ" ಎಂದಿದ್ದಾರೆ.
ಸಿದ್ದರಾಮಯ್ಯರ ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಎ.ಹೆಚ್.ವಿಶ್ವನಾಥ್ ಅವರು, "ನನ್ನನ್ನು ಸೇರಿದಂತೆ ಸಿದ್ದರಾಮಯ್ಯ ಅವರು ಕಾಂಗ್ರೆಸ್ನಲ್ಲಿದ್ದ ಹಲವು ಮಂದಿಗೆ ಅವರು ಸಿಎಂ ಆಗುವ ನಿಟ್ಟಿನಲ್ಲಿ ಬೆನ್ನಿಗೆ ಚೂರಿ ಹಾಕಿದ್ದಾರೆ. ಈಗ ಸಿದ್ದರಾಮಯ್ಯ ಅವರಿಗೆ ಆ ನೋವು ತಿಳಿಯುತ್ತಿದ್ದೆ" ಎಂದು ತಿಳಿಸಿದ್ದಾರೆ.
ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಕೈ ನಾಯಕರೊಬ್ಬರು, "ಈ ವಿಚಾರವನ್ನು ಚುನಾವಣೆ ಕಳೆದು ಎರಡು ವರ್ಷಗಳಾದ ನಂತರ ಏಕೆ ಹೇಳುತ್ತಿದ್ದಾರೆ?. ಈ ರೀತಿಯಾದ ಹೇಳಿಕೆಗೆಳು ಪಕ್ಷದ ಕಾರ್ಯಕರ್ತರಲ್ಲಿ ನಿರಾಸೆ ಮೂಡಿಸುತ್ತದೆ" ಎಂದಿದ್ದಾರೆ.
ತಮ್ಮ ಹೇಳಿಕೆಯ ವಿಚಾರವಾಗಿ ಕೈ ನಾಯಕರು ಅಸಮಾಧಾನ ವ್ಯಕ್ತಪಡಿಸುತ್ತಿರುವ ಹಿನ್ನೆಲೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಿದ್ದರಾಮಯ್ಯ ಅವರು, "ನಾನು ಚಾಮುಂಡೇಶ್ವರಿ ಕ್ಷೇತ್ರದಲ್ಲಿರುವ ಸ್ಥಳೀಯ ನಾಯಕರ ಬಗ್ಗೆ ಹೇಳಿಕೆ ನೀಡಿದ್ದು" ಎಂದು ಹೇಳಿದ್ದಾರೆ.