ಬೆಂಗಳೂರು, ಡಿ.24 (DaijiworldNews/PY): ಸ್ಮಾರ್ಟ್ ಸಿಟಿ ಯೋಜನೆಯಡಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳು ತಾತ್ಕಾಲಿಕ ಸ್ಥಗಿತವಾಗಲಿವೆ.
ನಿರ್ಮಾಣ ಹಾಗೂ ನೆಲಸಮ ತ್ಯಾಜ್ಯ ನಿರ್ವಹಣೆ-2016 ರ ನಿಯಮಗಳನ್ನು ಅನುಸರಿಸುವ ತನಕ ಮಂಗಳೂರಿನ ಸ್ಮಾರ್ಟ್ ಸಿಟಿ ಯೋಜನೆಗೆ ಸಂಬಂಧಿಸಿದ ಕಾಮಗಾರಿಗಳನ್ನು ಸ್ಥಗಿತಗೊಳಿಸಲು ಆಯಾ ಗುತ್ತಿಗೆದಾರರಿಗೆ ಸೂಚಿಸಲಾಗುವುದು ಎಂದು ಮಂಗಳೂರು ಮನಪಾ ಆಯುಕ್ತ ಹಾಗೂ ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ಅಕ್ಷಯ್ ಶ್ರೀಧರ್ ಹೈಕೋರ್ಟ್ಗೆ ತಿಳಿಸಿದ್ದಾರೆ.
ಮುಖ್ಯ ನ್ಯಾ.ಎ.ಎಸ್.ಓಕಾ ಹಾಗೂ ನ್ಯ.ಎಸ್.ವಿಶ್ವಜಿತ್ ಶೆಟ್ಟಿ ಅವರಿದ್ದ ವಿಭಾಗೀಯ ನ್ಯಾಯಪೀಠ ಪಚ್ಚನಾಡಿ, ಮಂದಾರದಲ್ಲಿ ಘನತ್ಯಾಜ್ಯ ಭೂಭರ್ತಿ ಘಟಕದಿಂದ ಉಂಟಾದ ಅನಾಹುತಗಳ ಬಗ್ಗೆ ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿತು.
ಈ ಸಂದರ್ಭ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದರು. ಈ ವೇಳೆ ಅವರನ್ನು ನ್ಯಾಯಪೀಠ ಪ್ರಶ್ನೆ -ಉತ್ತರ ವಿಧಾನದಲ್ಲಿ ವಿಚಾರಣೆ ನಡೆಸಿದ್ದು, ಸ್ಮಾರ್ಟ್ ಸಿಟಿ ಕಾಮಗಾರಿಗಳ ಅನುಷ್ಠಾನದಲ್ಲಿ ನಿಯಮ ಪಾಲಿಸಲಾಗುತ್ತಿದೆಯೇ?. ನಿಯಮಗಳನ್ನು ಪಾಲಿಸಲಾಗುತ್ತಿಲ್ಲ ಎಂದಾದರೆ ನಿಯಮಗಳನ್ನು ಪಾಲಿಸುವ ತನಕ ಕಾಮಗಾರಿಗಳನ್ನು ಸ್ಥಗಿತಗೊಳಿಸುತ್ತೀರಾ? ಎಂದು ಪ್ರಶ್ನಿಸಿದೆ.
ಈ ವೇಳೆ ಆಯುಕ್ತರು ವಿವರವಾದ ಉತ್ತರ ನೀಡಲು ಮುಂದಾಗಿದ್ದು, "ಪ್ರಶ್ನೆಗೆ ಹೌದು ಅಥವಾ ಇಲ್ಲ ಎಂದು ನೇರವಾದ ಉತ್ತರ ನೀಡಿ. ಸುತ್ತಿ ಬಳಸಿ ಹೇಳಿಕೆ ನೀಡಬೇಡಿ" ಎಂದು ನ್ಯಾಯಪೀಠ ಹೇಳಿತು.
"ನಿಯಮಗಳನ್ನು ಪಾಲಿಸಲಾಗುತ್ತಿಲ್ಲ. 2016ರ ನಿಯಮಗಳನ್ನು ಅನುಸರಿಸುವ ತನಕ ಕಾಮಗಾರಿಳನ್ನು ಸ್ಥಗಿತಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗುವುದು" ಎಂದು ನ್ಯಾಯಪೀಠಕ್ಕೆ ಅಕ್ಷಯ್ ಶ್ರೀಧರ್ ತಿಳಿಸಿದ್ದಾರೆ.
ಈ ಹೇಳಿಕೆಯನ್ನು ದಾಖಲಿಸಿಕೊಂಡ ನ್ಯಾಯಪೀಠ, "ಮುಂದಿನ ವಿಚಾರಣೆಯ ಸಮಯದಲ್ಲಿ ಆಯುಕ್ತರು 2016ರ ನಿಯಮಗಳನ್ನು ಪಾಲಿಸಲಾಗಿರುವ ಬಗ್ಗೆ ಸಮಧಾನಕರವಾದ ಪ್ರಮಾಣಪತ್ರವನ್ನು ಸಲ್ಲಿಸಬೇಕು. ಆ ಪ್ರಮಾಣಪತ್ರ ನ್ಯಾಯಾಲಯಕ್ಕೆ ಸಮಾಧಾನ ತಂದಲ್ಲಿ ಆಗ ಕಾಮಗಾರಿಯನ್ನು ಸ್ಥಗಿತಗೊಳಿಸುವ ಬಗ್ಗೆ ಆಯುಕ್ತರು ನೀಡಿರುವ ಹೇಳಿಕೆಯನ್ನು ಕೈಬಿಡುವ ವಿಚಾರದದ ಬಗ್ಗೆ ಪರಿಶೀಲನೆ ಮಾಡಲಾಗುವುದು" ಎಂದು ತಿಳಿಸಿದೆ.
ಅದೇ ಸಮಯದಲ್ಲಿ, ಸ್ಮಾರ್ಟ್ ಸಿಟಿ ಯೋಜನೆಯಡಿ ಕಾಮಗಾರಿಗಳ ಅನುಮೋದನೆಗಾಗಿ ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಸಲ್ಲಿಸಿದ ಮೇಲ್ಮನವಿಗಳನ್ನು ಮೂರು ವಾರಗಳಲ್ಲಿ ಪರಿಗಣಿಸುವಂತೆ ಹೈಕೋರ್ಟ್ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಗೆ ನಿರ್ದೇಶನ ನೀಡಿತು.
ಪಚ್ಚನಾಡಿ ಹಾಗೂ ಮಂದಾರ ಪ್ರದೇಶಕ್ಕೆ ಭೆಟಿ ನೀಡಿ, ಪ್ರದೇಶದ ಜನರಿಗೆ ಪಾಲಿಕೆಯಿಂದ ಕುಡಿಯುವ ನೀರು ಪೂರೈಸುವ ಬಗ್ಗೆ ಪರಿಶೀಲಿಸಿ ವರದಿಯನ್ನು ಸಲ್ಲಿಸುವಂತೆ ಹೈಕೋರ್ಟ್ ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿಗೆ ಸೂಚನೆ ನೀಡಿದೆ.