ಬೆಂಗಳೂರು, ಡಿ.24 (DaijiworldNews/PY): "ಹೊಸ ರೀತಿಯ ಕೊರೊನಾ ಹಿನ್ನೆಲೆ ರಾಜ್ಯದಲ್ಲಿ ಕರ್ಫ್ಯೂ ಜಾರಿ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್, "ರೂಪಾಂತರಿ ಕೊರೊನಾ ನಿಯಂತ್ರಿಸಲು ರಾಜ್ಯ ಸರ್ಕಾರದ ಕ್ರಮಗಳು ಹುಚ್ಚರ ಸಂತೆಯಲ್ಲಿ ತೆಗೆದುಕೊಳ್ಳುವ ನಿರ್ಧಾರದಂತಿದೆ" ಎಂದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ರೂಪಾಂತರಿ ಕೊರೊನಾ ನಿಯಂತ್ರಿಸಲು ರಾಜ್ಯ ಸರ್ಕಾರದ ಕ್ರಮಗಳು ಹುಚ್ಚರ ಸಂತೆಯಲ್ಲಿ ತೆಗೆದುಕೊಳ್ಳುವ ನಿರ್ಧಾರದಂತಿದೆ. ಕಾಟಾಚಾರದ ರಾತ್ರಿ ಕರ್ಪ್ಯೂ ಹೇರಿ ಸರ್ಕಾರ ಏನನ್ನು ಸಾಧಿಸಲು ಹೊರಟಿದೆ?.ವಿವೇಕಯುತ ಸರ್ಕಾರ ತೆಗೆದುಕೊಳ್ಳುವ ನಿರ್ಧಾರವೇ ಇದು?. ಈ ಸರ್ಕಾರಕ್ಕೇ ಅರಳು ಮರಳೋ?.ಅಥವಾ ಸರ್ಕಾರ ನಡೆಸುವವರಿಗೆ ಅರಳು ಮರಳೋ?.ಅರ್ಥವಾಗುತ್ತಿಲ್ಲ" ಎಂದಿದ್ದಾರೆ.
"ಕರ್ನಾಟಕ ರಾಜ್ಯದಲ್ಲಿ ದಿನಾಂಕ 24.12.2020 ರಿಂದ ಜನವರಿ 01, 2021 ರವರೆಗೆ, ರಾತ್ರಿ 11:00 ಗಂಟೆಯಿಂದ ಬೆಳಗ್ಗೆ 5:00 ಗಂಟೆಯವರೆಗೆ (ದಿನಾಂಕ 02.01.2021ರ ಬೆಳಗ್ಗೆ 5:00 ಗಂಟೆ) ಜಾರಿಯಲ್ಲಿರುತ್ತದೆ'' ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ.
''ರಾತ್ರಿ ಕರ್ಫ್ಯೂ ಸಂದರ್ಭದಲ್ಲಿ, ದಿನಾಂಕ 24.12.2020 ರ ರಾತ್ರಿ ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ನಡೆಯಲಿರುವ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು (ಮಿಡ್ ನೈಟ್ ಮಾಸ್) ಯಾವುದೇ ಅಡಚಣೆಯಿಲ್ಲದೆ ಮಾಡಬಹುದು'' ಎಂದಿದ್ದಾರೆ.