ನವದೆಹಲಿ, ಡಿ.24 (DaijiworldNews/HR): ಬ್ರಿಟನ್ನಿಂದ 4 ವಿಮಾನಗಳ ಮೂಲಕ ದೆಹಲಿಗೆ ಆಗಮಿಸಿದ್ದ 11 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಜೀನ್ಸ್ಟ್ರಿಂಗ್ ಡಯಾಗ್ನೋಸ್ಟಿಕ್ ಸೆಂಟರ್ ಸ್ಥಾಪಕಿ ಗೌರಿ ಅಗರ್ವಾಲ್ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, "ದೆಹಲಿ ವಿಮಾನನಿಲ್ದಾಣದಲ್ಲಿ ಎಲ್ಲ ಪ್ರಯಾಣಿಕರಿಗೆ ಕೊರೊನಾ ಪರೀಕ್ಷೆ ಮಾಡುವ ಹೊಣೆ ಹೊತ್ತಿದ್ದು, ಇನ್ನೂ 4 ವಿಮಾನಗಳಲ್ಲಿ ಬಂದಿದ್ದ 50 ಪ್ರಯಾಣಿಕರನ್ನು ಸಾಂಸ್ಥಿಕ ಕ್ವಾರಂಟೈನ್ನಲ್ಲಿ ಇರಿಸಲಾಗಿದೆ" ಎಂದರು.
ಇನ್ನು ಬ್ರಿಟನ್ನಲ್ಲಿ ಹೊಸ ಸ್ವರೂಪದ ಕೊರೊನಾ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಅಲ್ಲಿಂದ ಭಾರತದ ವಿಮಾನ ನಿಲ್ದಾಣಗಳಲ್ಲಿ ಬಂದಿಳಿಯುವವರು ಕಡ್ಡಾಯವಾಗಿ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಬೇಕೆಂದು ಕೇಂದ್ರ ಸರ್ಕಾರ ಆದೇಶಿಸಿದ್ದು, ಪ್ರಯಾಣಿಕರು ಯಾವುದೇ ಪ್ರಮಾಣಪತ್ರದ ಜೊತೆ ಬಂದಿದ್ದರೂ ಎಲ್ಲವನ್ನೂ ಮೀರಿ ಸರ್ಕಾರದ ನಿರ್ದೇಶನದಂತೆ ಪ್ರಯಾಣಿಕರಿಗೆ ಕೊರೊನಾ ಟೆಸ್ಟ್ ಮಾಡಲಾಗಿದೆ ಎಂದು ಅಗರ್ವಾಲ್ ತಿಳಿಸಿದ್ದಾರೆ.
ಕೊರೊನಾ ಧೃಡಪಟ್ಟ 11 ಪ್ರಯಾಣಿಕರಿಗೆ ಹೊಸ ಸ್ವರೂಪದ ಸೋಂಕು ತಗುಲಿದೆಯೆ ಎಂಬುದನ್ನು ತಿಳಿಯಲು ಪ್ರಯೋಗಾಲಯದ ಮಾದರಿಯನ್ನು ದೆಹಲಿಯ ಎನ್ಸಿಡಿಸಿಗೆ ಕಳುಹಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.