ಬೆಂಗಳೂರು,ಡಿ.24 (DaijiworldNews/HR): ಮಹಿಳೆಯೊಬ್ಬರು ನೀಡಿದ ದೂರಿಗೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಿಕೊಳ್ಳದ್ದಿದ್ದ ಕಲಬುರಗಿಯ ಸ್ಟೇಷನ್ ಬಜಾರ್ ಪೊಲೀಸ್ ಠಾಣಾಧಿಕಾರಿಗೆ ಹೈಕೋರ್ಟ್ ರಸ್ತೆ ಶುಚಿಗೊಳಿಸುವ ಶಿಕ್ಷೆ ವಿಧಿಸಿದೆ.
ಪೊಲೀಸ್ ಅಧಿಕಾರಿ ತನ್ನ ಕರ್ತವ್ಯ ಲೋಪಕ್ಕೆ ಬೇಷರತ್ ಕ್ಷಮೆ ಯಾಚಿಸಿದರೂ ಒಪ್ಪದ ನ್ಯಾಯಾಲಯವು ಒಂದು ವಾರ ಠಾಣೆಯ ಮುಂಭಾಗದ ರಸ್ತೆಯನ್ನು ಸ್ವತ್ಛಗೊಳಿಸಬೇಕು ಎಂದು ಆದೇಶಿಸಿದೆ.
ಕಲಬುರಗಿ ಜಿಲ್ಲೆ ಮಿಣಜಗಿ ತಾಂಡಾದ ತಾರಾಬಾಯಿ ಎಂಬವರು ತನ್ನ ಮಗ ಸುರೇಶ್ ಕಾಣೆಯಾಗಿದ್ದಾನೆಂದು ದೂರು ನೀಡಿದರೂ ಅದನ್ನು ಗಂಭೀರವಾಗಿ ಪರಿಗಣಿಸದಿರುವುದು ಕರ್ತವ್ಯ ಲೋಪ. ಪೊಲೀಸರು ತಮ್ಮ ಸ್ಟೇಷನ್ ಹೌಸ್ ಡೈರಿಯಲ್ಲಿ ಪ್ರಕರಣದ ವಿವರವನ್ನು ಮತ್ತು ಎಫ್ಐಆರ್ ಕೂಡ ದಾಖಲಿಸಿಲ್ಲ. ಈ ಮೂಲಕ ಠಾಣಾಧಿಕಾರಿಯು ಅರ್ಜಿದಾರರ ಹಕ್ಕಿಗೆ ಚ್ಯುತಿ ಉಂಟು ಮಾಡಿದ್ದಾರೆ. ಹಾಗಾಗಿ ಈ ಶಿಕ್ಷೆ ವಿಧಿಸುತ್ತಿದ್ದೇವೆ ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.