ಕಾಸರಗೋಡು, ಡಿ.24 (DaijiworldNews/HR): ಡಿವೈಎಫ್ಐ ಕಾರ್ಯಕರ್ತನೋರ್ವನನ್ನು ತಂಡವೊಂದು ಇರಿದು ಹತ್ಯೆಗೈದ ಘಟನೆ ಬುಧವಾರ ರಾತ್ರಿ ಕಾಞಂಗಾಡ್ನಲ್ಲಿ ನಡೆದಿದೆ.
ಹತ್ಯೆಯಾದವರನ್ನು ಅಬ್ದುಲ್ ರಹಮಾನ್ (29) ಎಂದು ಗುರುತಿಸಲಾಗಿದೆ.
ಕಲ್ಲೂರಾವಿ ನಿವಾಸಿಯಾಗಿದ್ದ ಅಬ್ದುಲ್ ಬೈಕ್ನಲ್ಲಿ ಸ್ನೇಹಿತನ ಜೊತೆ ಮನೆಗೆ ತೆರಳುತ್ತಿದ್ದಾಗ ಕಾಞಂಗಾಡ್ ಕಲ್ಲೂರಾವಿ-ಹಳೆ ಕಡಪ್ಪುರ ರಸ್ತೆಯಲ್ಲಿ ತಂಡವೊಂದು ಈ ಕೃತ್ಯ ನಡೆಸಿದೆ.
ಬೈಕನ್ನು ತಡೆದ ತಂಡವು ಇರಿದು ಪರಾರಿಯಾಗಿದ್ದು, ಗಂಭೀರ ಗಾಯಗೊಂಡಿದ್ದ ಅಬ್ದುಲ್ ರಹಮಾನ್ ಅವರನ್ನು ಆಸ್ಪತ್ರೆಗೆ ತಲುಪಿಸಿದರೂ ಜೀವ ಉಳಿಸಲಾಗಲಿಲ್ಲ. ಜೊತೆಗಿದ್ದ ಶುಹೈಬ್ ಅವರು ಕೂಡ ಗಾಯಗೊಂಡಿದ್ದಾರೆ.
ಕೃತ್ಯದ ಸಂದರ್ಭದಲ್ಲಿ ಓರ್ವ ಆರೋಪಿಗೂ ಗಾಯವಾಗಿದ್ದು,ಇರ್ಷಾದ್(26) ಎಂಬಾತನನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೃತ್ಯದ ಹಿಂದೆ ಮುಸ್ಲಿಂ ಲೀಗ್ ಕಾರ್ಯಕರ್ತರ ಕೈವಾಡವಿದೆ ಎಂದು ಡಿವೈಎಫ್ಐ ಆರೋಪಿಸಿ, ಕಾಞಂಗಾಡ್ ನಗರಸಭಾ ವ್ಯಾಪ್ತಿಯಲ್ಲಿ ಇಂದು ಹರತಾಳಕ್ಕೆ ಕರೆ ನೀಡಿದೆ.
ಇನ್ನು ಇತ್ತೀಚಿಗೆ ನಡೆದ ಸ್ಥಳೀಯಾಡಳಿತ ಸಂಸ್ಥೆ ಚುನಾವಣೆಯ ವಿಜಯೋತ್ಸವ ಸಂದರ್ಭದಲ್ಲಿ ಡಿವೈಎಫ್ಐ ಮತ್ತು ಮುಸ್ಲಿಂ ಲೀಗ್ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದ್ದು, ಇದಕ್ಕೆ ಪ್ರತೀಕಾರ ಎಂಬಂತೆ ಈ ಕೃತ್ಯ ನಡೆದಿರಬಹುದು ಎಂದು ಸಂಶಯಿಸಲಾಗಿದೆ.
ಕೃತ್ಯದಲ್ಲಿ ಆರು ಮಂದಿ ಶಾಮೀಲಾಗಿದ್ದರು ಎಂಬ ಪ್ರಾಥಮಿಕ ಮಾಹಿತಿ ಪೊಲೀಸರಿಗೆ ಲಭಿಸಿದೆ.
ಮೂರು ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಕಾಞಂಗಾಡ್ ಡಿವೈಎಸ್ಪಿ ವಿನೋದ್ ನೇತೃತ್ವದಲ್ಲಿ ತನಿಖೆ ಆರಂಭಿಸಲಾಗಿದೆ.