ನವದೆಹಲಿ, ಡಿ.24 (DaijiworldNews/HR): ಖಲಿಸ್ತಾನ ಭಯೋತ್ಪಾದಕ ಗುರ್ಜೀತ್ ಸಿಂಗ್ ನಿಜ್ಜರ್ ಎಂಬಾತ ಸೈಪ್ರಸ್ನಿಂದ ಗಡಿ ಪಾರಾಗಿದ್ದು ಆತನನ್ನು ನವದೆಹಲಿಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್ಐಎ) ಅಧಿಕಾರಿಯೊಬ್ಬರು ಹೇಳಿದ್ದಾರೆ.
ಗುರ್ಜೀತ್ ಸಿಂಗ್ ಮೇಲೆ ಖಲಿಸ್ತಾನ ಪ್ರತ್ಯೇಕ ರಾಜ್ಯಕ್ಕಾಗಿ ಭಾರತದಲ್ಲಿ ಸಿಖ್ ಭಯೋತ್ಪಾದನೆಯನ್ನು ಪುನರುಜ್ಜೀವನಗೊಳಿಸಲು ಯತ್ನಿಸುತ್ತಿದ್ದ ಕ್ರಿಮಿನಲ್ ಆರೋಪ ಇದೆ.
ಆರೋಪಿ ಗುರ್ಜೀತ್ ಜೊತೆಗೆ ಇತರ ಆರೋಪಿಗಳಾದ ಹರ್ಪಲ್, ಮೊಯಿನ್ ಖಾನ್ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದು, ಭಾರತದಲ್ಲಿ ಮುಸ್ಲಿಮರು ಮತ್ತು ಸಿಖ್ಖರ ಮೇಲಿನ ದೌರ್ಜನ್ಯದ ಕುರಿತು ಚರ್ಚೆ ನಡೆಸುವ ಮೂಲಕ ಪ್ರತ್ಯೇಕ ಖಲಿಸ್ತಾನ ರಾಜ್ಯದ ಬೇಡಿಕೆಯನ್ನು ಮುಂದಿಟ್ಟುಕೊಂಡು ಗುರ್ಜೀತ್ ಸಿಂಗ್ ಹಾಗೂ ಮೊಯಿನ್ ಖಾನ್ ಜನರನ್ನು ಪ್ರಚೋದಿಸುತ್ತಿದ್ದರು ಎಂದು ಎನ್ಐಎ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು 2019ರಲ್ಲಿ ವಿಶೇಷ ಎನ್ಐಎ ನ್ಯಾಯಾಲಯದಲ್ಲಿ ನಿಜ್ಜರ್, ಹರ್ಪಾಲ್, ಮೊಯಿನ್ ಮತ್ತು ಸುಂದರ್ ಲಾಲ್ ಪರಾಶರ್ ಎಂಬುವರ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಲಾಗಿತ್ತು.