ಬೆಳಗಾವಿ, ಡಿ.23 (DaijiworldNews/MB) : ''ಕೊರೊನಾ ಎರಡನೇ ಅಲೆ ತಡೆಯುವ ನಿಟ್ಟಿನಲ್ಲಿ ಹೇರಲಾಗುತ್ತಿರುವ ರಾತ್ರಿ ಕರ್ಫ್ಯೂ ವೇಳೆ ರಾಜ್ಯ ರಸ್ತೆ ಸಾರಿಗೆ ಬಸ್ಗಳ ಸಂಚಾರಕ್ಕೆ ಯಾವುದೇ ತೊಂದರೆ ಇಲ್ಲ'' ಎಂದು ಸಾರಿಗೆ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದರು.
ಬುಧವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ''ಮುಖ್ಯಮಂತ್ರಿಯವರು ಸಾರಿಗೆ ಬಸ್ಗಳ ಸಂಚಾರದಲ್ಲಿ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ರಾತ್ರಿ ಹೊರಡುವ ಬಸ್ನಲ್ಲಿ ಯಾವುದೇ ವ್ಯತ್ಯಾಸವಿಲ್ಲ'' ಎಂದು ತಿಳಿಸಿದರು.
ಹಾಗೆಯೇ, ''ಸರಕು ಸಾಗಣೆ ವಾಹನಗಳು ಕೂಡಾ ಓಡಾಟ ನಡೆಸಲಿದೆ. ಎಂದಿನಂತೆ ಬಸ್ ಸಂಚಾರವಿರಲಿದೆ'' ಎಂದು ತಿಳಿಸಿದರು.
''ರಾಜ್ಯದಲ್ಲಿ ಮತ್ತೆ ಲಾಕ್ಡೌನ್ ಇಲ್ಲ, ಯಾವ ರಾಜ್ಯಕ್ಕೂ ಬಸ್ ಸಂಚಾರ ಸ್ಥಗಿತವಾಗಲ್ಲ'' ಎಂದು ಕೂಡಾ ಈ ವೇಳೆಯೇ ಸ್ಪಷ್ಟನೆ ನೀಡಿದರು.
ಇನ್ನು ಈ ಸಂದರ್ಭದಲ್ಲೇ ರಾತ್ರಿ ಕರ್ಫ್ಯೂಗೆ ಟ್ಯಾಕ್ಸಿ ಮಾಲೀಕರ ಸಂಘ ಹಾಗೂ ಬಾರ್ಗಳ ಮಾಲೀಕರು ವಿರೋಧ ವ್ಯಕ್ತಪಡಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ''ನಾವು ಈ ಸಂದರ್ಭ ಲಾಭ ನಷ್ಟದ ಲೆಕ್ಕಾಚಾರ ಹಾಕುವುದು ಸರಿಯಲ್ಲ. ಎಲ್ಲದಕ್ಕೂ ಮೊದಲು ಜೀವ ಅಮೂಲ್ಯವಾದುದು. ಜೀವವಿದ್ದರೆ ಏನು ಬೇಕಾದರೂ ಮಾಡಬಹುದು'' ಎಂದು ತಿಳಿಸಿದರು.
''ಮೊದಲಿನಿಂದಲೂ ಕಾಂಗ್ರೆಸ್ನವರು ಎಲ್ಲದಕ್ಕೂ ವಿರೋಧ ಮಾಡುವ ಅಭ್ಯಾಸ ಮಾಡಿಕೊಂಡಿದ್ದಾರೆ. ಅದುವೇ ಅವರ ಧರ್ಮವೆಂದು ಅವರು ಭಾವಿಸಿಕೊಂಡಿದ್ದಾರೆ. ಆದರೆ ಜೀವದ ಜೊತೆ ಚೆಲ್ಲಾಟವಾಡುವುದು ಸರಿಯಲ್ಲ'' ಎಂದು ಹೇಳಿದರು.