ಬೆಂಗಳೂರು, ಡಿ.23 (DaijiworldNews/MB) : ''ರಾತ್ರಿ ಕರ್ಫ್ಯೂ ಸಂದರ್ಭದಲ್ಲಿ ಡಿಸೆಂಬರ್ 24 ರಂದು ರಾತ್ರಿ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ನಡೆಯಲಿರುವ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು (ಮಿಡ್ ನೈಟ್ ಮಾಸ್) ಯಾವುದೇ ಅಡಚಣೆಯಿಲ್ಲದೆ ಮಾಡಬಹುದು'' ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ಈಗಾಗಲೇ ಮಾಧ್ಯಮಗೋಷ್ಠಿ ನಡೆಸಿರುವ ಮುಖ್ಯಮಂತ್ರಿ, ''ಹೊಸ ಬಗೆಯ ಕೊರೊನಾ ಹಿನ್ನೆಲೆಯಲ್ಲಿ ಇಂದು ರಾತ್ರಿ ಹತ್ತು ಗಂಟೆಯಿಂದ ನಾಳೆ ಬೆಳಗ್ಗೆ 6 ಗಂಟೆಯವರೆಗೆ ರಾತ್ರಿ ಕರ್ಫ್ಯೂ ಹಾಕಲಾಗುವುದು. ಇದು ಜನವರಿ 2 ರ ಬೆಳಿಗ್ಗೆ 6 ಗಂಟೆಯವರೆಗೂ ಜಾರಿಯಲ್ಲಿರುತ್ತದೆ. ಇದು ಇಡೀ ರಾಜ್ಯಕ್ಕೆ ಅನ್ವಯವಾಗುತ್ತದೆ'' ಎಂದು ತಿಳಿಸಿದ್ದರು.
ಈ ವಿಚಾರಕ್ಕೆ ಸಂಬಂಧಿಸಿ ದಿನಾಂಕ ಹಾಗೂ ಸಮಯವನ್ನು ಬದಲಾವಣೆ ಮಾಡಿ ಟ್ವೀಟ್ ಮಾಡಿರುವ ಮುಖ್ಯಮಂತ್ರಿ, ''ಕರ್ನಾಟಕ ರಾಜ್ಯದಲ್ಲಿ ಇಂದಿನಿಂದ ಜಾರಿ ಮಾಡಲು ಉದ್ದೇಶಿಸಿದ್ದ ರಾತ್ರಿ ಕರ್ಫ್ಯೂ ಬದಲಾಗಿ ನಾಳೆ, ಅಂದರೆ ದಿನಾಂಕ 24.12.2020 ರಿಂದ ಜನವರಿ 01, 2021 ರವರೆಗೆ, ರಾತ್ರಿ 11:00 ಗಂಟೆಯಿಂದ ಬೆಳಗ್ಗೆ 5:00 ಗಂಟೆಯವರೆಗೆ (ದಿನಾಂಕ 02.01.2021ರ ಬೆಳಗ್ಗೆ 5:00 ಗಂಟೆ) ಜಾರಿಯಲ್ಲಿರುತ್ತದೆ'' ಎಂದು ತಿಳಿಸಿದ್ದಾರೆ.
''ರಾತ್ರಿ ಕರ್ಫ್ಯೂ ಸಂದರ್ಭದಲ್ಲಿ, ದಿನಾಂಕ 24.12.2020 ರ ರಾತ್ರಿ ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ನಡೆಯಲಿರುವ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು (ಮಿಡ್ ನೈಟ್ ಮಾಸ್) ಯಾವುದೇ ಅಡಚಣೆಯಿಲ್ಲದೆ ಮಾಡಬಹುದು'' ಎಂದು ತಿಳಿಸಿದ್ದಾರೆ.