ಕೋಲಾರ, ಡಿ.23 (DaijiworldNews/MB) : ''ರಾತ್ರಿ 10 ಗಂಟೆ ಬಳಿಕ ಮದ್ಯದಂಗಡಿ ತೆರೆದರೆ ಪರವಾನಗಿ ರದ್ದು ಮಾಡಲಾಗುವುದು'' ಎಂದು ಎಚ್ಚರಿಕೆ ನೀಡಿರುವ ಅಬಕಾರಿ ಸಚಿವ ಎಚ್.ನಾಗೇಶ್, ಕೊರೊನಾ ಎರಡನೇ ಅಲೆ ಆರಂಭವಾದ ಹಿನ್ನೆಲೆ ರಾತ್ರಿ ಕರ್ಫ್ಯೂ ಜಾರಿ ಮಾಡಿರುವುದು ಸ್ವಾಗತಿಸಿದ್ದಾರೆ.
ಬುಧವಾರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ''ರಾತ್ರಿ ಕರ್ಫ್ಯೂ ಸರಿಯಾಗಿ ಜಾರಿ ಮಾಡುವಲ್ಲಿ ಅಬಕಾರಿ ಇಲಾಖೆ ಪಾತ್ರ ನಿರ್ಣಾಯಕವಾದದ್ದು. ಮದ್ಯದ ವಹಿವಾಟಿನಲ್ಲಿ ಯಾವುದೇ ನಿಯಮ ಸಡಿಲಿಕೆ ಮಾಡಿದರೆ ಕೊರೊನಾ ಸೋಂಕಿನ ಪ್ರಮಾಣ ಅಧಿಕವಾಗಬಹುದು'' ಎಂದು ಹೇಳಿದರು.
''ರಾತ್ರಿ 10ರ ಬಳಿಕ ಮದ್ಯದಂಗಡಿ ಬಂದ್ ಮಾಡಿಸಲು ಇಲಾಖೆ ಸಿಬ್ಬಂದಿಗೆ ನಿರ್ದೇಶನ ನೀಡಲು ಇಲಾಖೆ ಆಯುಕ್ತರು ಮತ್ತು ಜಿಲ್ಲೆಗಳ ಉಪ ಆಯುಕ್ತರಿಗೆ ಸೂಚನೆ ನೀಡಲಾಗಿದೆ'' ಎಂದು ತಿಳಿಸಿದರು.
''ಹಾಗೆಯೇ ಕೊರೊನಾ ಮಾರ್ಗಸೂಚಿ ಪಾಲನೆ ಬಗ್ಗೆ ಮದ್ಯದಂಗಡಿ ಮಾಲೀಕರಿಗೆ ಇ–ಮೇಲ್ ಮೂಲಕ ಸಂದೇಶ ಕಳುಹಿಸಲಾಗಿದೆ'' ಎಂದು ಹೇಳಿದರು.