ಬೆಂಗಳೂರು, ಡಿ.23 (DaijiworldNews/PY): "ನಾನು ಬಂಡೆನೂ ಅಲ್ಲ, ಜಲ್ಲಿಯೂ ಅಲ್ಲ, ಮರಳು ಅಲ್ಲ. ಈಗಲೂ ಕೂಡಾ ಕುಮಾರಸ್ವಾಮಿ ಅವರು ನನ್ನ ಸ್ನೇಹಿತರು. ಯಾರನ್ನೂ ಸಹ ನಾನು ದ್ವೇಷ ಮಾಡುವುದಿಲ್ಲ" ಎದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಮಾತನಾಡಿದ ಅವರು, "ಈಗಲೂ ನಾನು ಹಾಗೂ ಕುಮಾರಸ್ವಾಮಿ ಅವರು ಸ್ನೇಹಿತರು. ನಾನು ಯಾರನ್ನೂ ಕೂಡಾ ದ್ವೇಷಿಸುವುದಿಲ್ಲ. ಅವರ ಹೇಳಿಕೆಯ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ" ಎಂದಿದ್ದಾರೆ.
ಸಮ್ಮಿಶ್ರ ಸರ್ಕಾರ ಸಂಪದ್ಭರಿತ ಖಾತೆಯ ಕಾರಣಕ್ಕಾಗಿ ಇರಬೇಕು ಎಂದು ಡಿಕೆಶಿ ಅವರು ಬಯಸಿದ್ದರು ಎನ್ನುವ ಹೆಚ್ಡಿಕೆ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, "ನಾನು ಏಕೆ ಜೆಡಿಎಸ್ ವಿಚಾರವಾಗಿ ಮಾತನಾಡಬೇಕು. ಅವರದ್ದು ಕೂಡಾ ಒಂದು ಪಕ್ಷವಾಗಿದೆ. ಏಕೆ ಅವರನ್ನು ಡಿಗ್ರೇಡ್ ಮಾಡುವುದು?. ಸಿಎಂ ಬಿಎಸ್ವೈ ಹಾಗೂ ಅವರ ಅಡ್ಜೆಸ್ಟ್ಮೆಂಟ್ ಏನಿದೆ ಎಂದು ತಿಳಿದಿಲ್ಲ" ಎಂದಿದ್ದಾರೆ.
ಶಾಲಾರಂಭ ವಿಚಾರದ ಬಗ್ಗೆ ಮಾತನಾಡಿದ ಅವರು, "ಶಿಕ್ಷಣ ಸಚಿವರು ಸಿಎಂ ಹಾಗೂ ಪೋಷಕರೊಂದಿಗೆ ಮಾತನಾಡುತ್ತೇನೆ ಎಂದು ಹೇಳುತ್ತಿದ್ದಾರೆ. ಈ ಗೊಂದಲವನ್ನು ಸರ್ಕಾರ ಮೊದಲ ಪರಹರಿಸಬೇಕು. ಮಕ್ಕಳನ್ನು ಕೂಡಾ ರಕ್ಷಣೆ ಮಾಡಬೇಕು. ಅಲ್ಲದೇ ಶಿಕ್ಷಕರಿಗೂ ಕೂಡಾ ಸಂಬಳ ನೀಡಬೇಕು" ಎಂದು ಹೇಳಿದ್ದಾರೆ.
"ಮಕ್ಕಳ ಭವಿಷ್ಯ ಸೇರಿದಂತೆ, ಪರೀಕ್ಷೆ ಎಲ್ಲಾ ವಿಚಾರಗಳು ಕೂಡಾ ಮುಖ್ಯವಾಗಿದೆ. ಒಂದು ರಾಜಕೀಯ ಪಕ್ಷವಾಗಿ ನಮ್ಮ ಅಭಿಪ್ರಾಯಕ್ಕಿಂದ ಸರ್ಕಾರದಲ್ಲಿ ಸರಿಯಾದ ಸ್ಪಷ್ಟನೆ ಇಲ್ಲ. ಸರ್ಕಾರದ ತೀರ್ಮಾನದ ಬಗ್ಗೆ ನನಗೂ ಕೂಡಾ ಗಾಬರಿಯಾಗುತ್ತಿದೆ" ಎಂದಿದ್ದಾರೆ.
"ನಮ್ಮ ಮಾತು, ಸಲಹೆಗಳನ್ನು ಸರ್ಕಾರ ಕೇಳುವುದಿಲ್ಲ. ಸರ್ಕಾರದ ಬಳಿ ದೊಡ್ಡ ತಜ್ಞರು, ಪಂಡಿತರಿದ್ದಾರೆ. ಯಾವುದೇ ಒಂದು ಗಲಾಟೆಯಾದರೂ ಕೂಡಾ ಆ ಗಲಾಟೆಗೆ ಕಾಂಗ್ರೆಸ್ಸಿಗರೇ ಕಾರಣ ಎಂದು ಹೇಳುತ್ತಾರೆ. ಕೊರೊನಾ ವಿಚಾರವಾಗಿ ತಜ್ಞರೊಂದಿಗೆ ನಾನು ಚರ್ಚಿಸಿ ಮಾತನಾಡುತ್ತೇನೆ" ಎಂದು ತಿಳಿಸಿದ್ದಾರೆ.