ಬೆಂಗಳೂರು, ಡಿ.23 (DaijiworldNews/PY): "ಜ.1ರಿಂದ ಶಾಲಾ-ಕಾಲೇಜುಗಳನ್ನು ಪುನರಾರಂಭಿಸುವ ತೀರ್ಮಾನದಲ್ಲಿ ಯಾವುದೇ ರೀತಿಯಾದ ಬದಲಾವಣೆ ಇಲ್ಲ" ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದರು.
ವಿಧಾನಸೌಧದಲ್ಲಿ ನಡೆದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಶಾಲಾ-ಕಾಲೇಜು ಪುನರಾರಂಭಿಸುವ ಬಗ್ಗೆ ಇತ್ತೀಚೆಗೆ ಸಿಎಂ ಅವರೊಂದಿಗೆ ನಡೆದ ತಾಂತ್ರಿಕಾ ಸಲಹಾ ಸಭೆಯಲ್ಲಿ ತೀರ್ಮಾನ ಮಾಡಲಾಗಿತ್ತು. ಸಮಿತಿಯು ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪ್ರಾರಂಭ ಮಾಡಲು ಒಪ್ಪಿಗೆ ನೀಡಿದೆ. ತಾಂತ್ರಿಕ ಸಮಿತಿಯ ನಿರ್ದೇಶನದ ಅನ್ವಯ ಮಾರ್ಗಸೂಚಿಯನ್ನು ಕೂಡಾ ಬಿಡುಗಡೆ ಮಾಡಿದ್ದೇವೆ" ಎಂದು ತಿಳಿಸಿದರು.
"ಸಭೆಯಲ್ಲಿ ವಿದ್ಯಾಗಮ ಪ್ರಾರಂಭದ ವಿಚಾರವಾಗಿಯೂ ಕೂಡಾ ಚರ್ಚಿಸಿದ್ದೇವೆ. ಅಲ್ಲದೇ, ಎಲ್ಲಾ ಶಿಕ್ಷಕರಿಗೂ ಕೂಡಾ ಆರ್ಟಿಪಿಸಿಆರ್ ಟೆಸ್ಟ್ಗೆ ಸೂಚನೆ ನೀಡಲಾಗಿದೆ. ಈ ಸಂದರ್ಭ 14 ಜಿಲ್ಲೆಗಳ ಎಲ್ಲಾ ಜಿ.ಪಂ.ಯ ಸಿಇಒ ಸೇರಿದಂತೆ ಡಿಡಿಪಿಐ, ಡಿಡಿಪಿಯು ಹಾಗೂ ಪ್ರಾಂಶುಪಾಲರೊಂದಿಗೆ ಸಭೆ ಮಾಡಲಾಯಿತು. ಸಭೆಯಲ್ಲೂ ಕೂಡಾ ಇದೇ ರೀತಿಯಾದ ಅಭಿಪ್ರಾಯ ವ್ಯಕ್ತವಾಗಿದೆ" ಎಂದು ಹೇಳಿದರು.
"ಶಾಲೆಗ ಬರುವ ಪ್ರತಿಯೋರ್ವ ವಿದ್ಯಾರ್ಥಿಗಳಿಗೆ ಅವರ ಪೋಷಕರ ಅನುಮತಿ ಕಡ್ಡಾಯ. ಇಲ್ಲವಾದಲ್ಲಿ ಶಾಲೆಗೆ ಪ್ರವೇಶವಿಲ್ಲ. 50 ವರ್ಷ ದಾಟಿದ ಶಿಕ್ಷಕರು ಮಾಸ್ಕ್ ಜೊತೆ ಕಡ್ಡಾಯವಾಗಿ ಫೇಸ್ ಶೀಲ್ಡ್ ಕೂಡಾ ಧರಿಸಬೇಕು" ಎಂದರು.
"ಶಾಲೆಗಳಿಗೆ ಮಕ್ಕಳನ್ನು ಕಳುಹಿಸುವುದು ಪೋಷಕರಿಗೆ ಬಿಟ್ಟ ಆಯ್ಕೆಯಾಗಿದೆ. ಕೇಂದ್ರ ಹಾಗೂ ತಾಂತ್ರಿಕ ಸಲಹಾ ಸಮಿತಿಯ ಅನ್ವಯ ಬಿಸಿಯೂಟ ಇಲ್ಲ. ಈ ವಿಚಾರದ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನಿಸುತ್ತೇವೆ. ಆದರೆ, ಕ್ಷೀರಭಾಗ್ಯ ಪ್ರಾರಂಭ ಮಾಡುವಂತೆ ಕೆಲವರು ತಿಳಿಸಿದ್ದಾರೆ" ಎಂದು ಹೇಳಿದರು.
"ದ.ಕ. ಹಾಗೂ ಉಡುಪಿ ಜಿಲ್ಲೆಗಳಿಂದ ಕೆಲವರು ಎಲ್ಲಾ ತರಗತಿಗಳನ್ನು ಆರಂಭ ಮಾಡುವಂತೆ ಕೇಳುತ್ತಿದ್ದಾರೆ. ಆದರೆ, ಎಲ್ಲಾ ತರಗತಿಗಳನ್ನು ಕೂಡಾ ಪ್ರಾರಂಭ ಮಾಡುವುದು ಶಿಕ್ಷಣ ಇಲಾಖೆಯ ತೀರ್ಮಾನವಲ್ಲ. ಇಲ್ಲಿ ತಾಂತ್ರಿಕ ಸಮಿತಿಯ ತೀರ್ಮಾನ ಮುಖ್ಯ" ಎಂದರು.
"ಎಲ್ಲಾ ವಿಭಾಗದ ಡಿಡಿಪಿಐ, ಡಿಡಿಪಿಯುಗಳು ತಮ್ಮ ತಮ್ಮ ಜಿಲ್ಲೆಯ ಅನುದಾನಿತ ಪದವಿ ಪೂರ್ವ ಅನುದಾನ ರಹಿತ ಕಾಲೇಜುಗಳ ಮುಖ್ಯಸ್ಥರೊಂದಿಗೆ ಸುರಕ್ಷತಾ ಕ್ರಮದ ವಿಚಾರವಾಗಿ ಗುರುವಾರ ಸಭೆ ನಡೆಸಲು ತಿಳಿಸಿದ್ದೇನೆ" ಎಂದು ಹೇಳಿದರು.
ಕೊರೊನಾ ವೈರಸ್ ರೂಪಾಂತರದ ಮಧ್ಯೆ ಶಾಲಾರಂಭಿಸುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ತಾಂತ್ರಿಕ ಸಲಹಾ ಸಮಿತಿಯ ಮಾರ್ಗದರ್ಶನದ ಮೇರೆಗೆ ಈ ತೀರ್ಮಾನವಾಗಿದೆ. ಯಾವ ಪೋಷಕರಿಗೂ ಕೂಡಾ ಮಕ್ಕಳನ್ನು ಶಾಲೆಗೆ ಕಳುಹಿಸಿ ಎಂದು ನಾವು ಒತ್ತಾಯಿಸಿಲ್ಲ. ಅವರು ಸ್ವಂತ ತೀರ್ಮಾನ ಕೈಗೊಳ್ಳಬಹುದು. ಬಾಲ ಕಾರ್ಮಿಕ, ಬಾಲ್ಯ ವಿವಾಹ ಪದ್ದತಿಗಳು ಅಧಿಕವಾಗುತ್ತಿವೆ. ಈ ಕಾರಣದಿಂದ ಶಾಲಾರಂಭ ಮಾಡುತ್ತಿದ್ದೇವೆ" ಎಂದರು.