ನವದೆಹಲಿ, ಡಿ.23 (DaijiworldNews/MB) : ಕಾರ್ಯಕ್ರಮವೊಂದರಲ್ಲಿ ಪಾಕಿಸ್ತಾನದ ವಿರುದ್ಧ ಅವಹೇಳನಕಾರಿ ಮಾತನಾಡಿರುವ ಆರೋಪ ಹೊತ್ತ ರಿಪಬ್ಲಿಕ್ ಟಿ.ವಿ ಸಂಪಾದಕ ಅರ್ನಬ್ ಗೋಸ್ವಾಮಿಗೆ ಬ್ರಿಟನ್ ಸರ್ಕಾರ 20 ಸಾವಿರ ಪೌಂಡ್ (ಸುಮಾರು 10.73 ಲಕ್ಷ ರೂಪಾಯಿ) ದಂಡ ವಿಧಿಸಿದೆ.
2019ರ ಸೆ.6ರಂದು 'ಪೂಚ್ ತಾ ಹೈ ಭಾರತ್' ಎಂಬ ಕಾರ್ಯಕ್ರಮದಲ್ಲಿ ಅರ್ನಬ್ ಗೋಸ್ವಾಮಿ ಮತ್ತು ಪ್ಯಾನೆಲ್ನಲ್ಲಿ ಅತಿಥಿಯಾಗಿದ್ದವರು ಆಕ್ಷೇಪಾರ್ಹ ಚರ್ಚೆಯನ್ನು ನಡೆಸಿದ್ದಾರೆ ಎಂದು ವರದಿ ತಿಳಿಸಿದೆ.
ಅತಿಥಿಗಳು ಪಾಕಿಸ್ತಾನದ ವಿರುದ್ಧ ಅಸಭ್ಯ ಪದ ಬಳಸಿದ್ದಾರೆ. ದ್ವೇಷಪೂರಿತ ಹೇಳಿಕೆ ನೀಡಿದ್ದಾರೆ ಎಂದು ಬ್ರಿಟನ್ನ ಸಂವಹನ ನಿಯಂತ್ರಕ ಪ್ರಾಧಿಕಾರ ಹೇಳಿದೆ.
ಕಾರ್ಯಕ್ರಮದಲ್ಲಿ ಪಾಕಿಸ್ತಾನದ ಕುರಿತು ಮಾತನಾಡಿದ ಅರ್ನಬ್ ಗೋಸ್ವಾಮಿ, ''ಪಾಕಿಸ್ತಾನದ ವಿಜ್ಞಾನಿಗಳು, ಡಾಕ್ಟರ್ಗಳು, ನಾಯಕರು, ರಾಜಕೀಯ ಮುಖಂಡರು ಎಲ್ಲರೂ ಭಯೋತ್ಪಾದಕರು. ಅವರ ಕ್ರೀಡಾಪಟುಗಳು ಕೂಡಾ ಭಯೋತ್ಪಾದಕರು. ಪಾಕಿಸ್ತಾನದಲ್ಲಿರುವ ಪ್ರತಿಯೊಂದು ಮಕ್ಕಳು ಕೂಡಾ ಭಯೋತ್ಪಾದಕರು'' ಎಂದು ಹೇಳಿಕೆ ನೀಡಿದ್ದರು.
ಹಾಗೆಯೇ ಪ್ಯಾನೆಲ್ನಲ್ಲಿದ್ದ ಇತರ ಅತಿಥಿಗಳು ಕೂಡಾ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು.