ಲಕ್ನೋ, ಡಿ.23 (DaijiworldNews/MB) : ''ರೈತರು ದೇಶದ ಹೆಮ್ಮೆ, ಅವರನ್ನು ಅವಮಾನಿಸುವುದನ್ನು ನಿಲ್ಲಿಸಿ'' ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಬಿಜೆಪಿಗೆ ತಿಳಿಸಿದ್ದಾರೆ.
ಇಂದು ರಾಷ್ಟ್ರೀಯ ರೈತರ ದಿನಾಚರಣೆಯಾಗಿದ್ದು ಈ ನಿಟ್ಟಿನಲ್ಲಿ ಟ್ವೀಟ್ ಮಾಡಿರುವ ಅವರು, ''ಚೌಧರಿ ಚರಣ್ ಸಿಂಗ್ ಅವರ ಜನ್ಮ ದಿನಾಚರಣೆಯಂದು ಅವರಿಗೆ ಗೌರವ ಕೋಟಿ ಕೋಟಿ ನಮನಗಳು. ಬಿಜೆಪಿಯ ಆಳ್ವಿಕೆಯಲ್ಲಿ ದೇಶದ ಇತಿಹಾಸದಲ್ಲೇ ರೈತರಿಗೆ ಎಂತಹ ಸ್ಥಿತಿ ಬಂದಿದೆ ಎಂದರೆ, 'ರೈತ ದಿನ'ವಾದ ಇಂದು ದೇಶದ ರೈತರು ಸಂಭ್ರಮಾಚರಣೆಯ ಬದಲು ಬೀದಿಗಳಲ್ಲಿ ಹೋರಾಡುವಂತೆ ಅನಿವಾರ್ಯ ಸ್ಥಿತಿ ಒದಗಿಸಿದೆ. ಬಿಜೆಪಿ ರೈತರನ್ನು ಅವಮಾನಿಸುವುದನ್ನು ನಿಲ್ಲಿಸಬೇಕು, ಏಕೆಂದರೆ ರೈತರು ಭಾರತದ ಹೆಮ್ಮೆ'' ಎಂದು ಹೇಳಿದ್ದಾರೆ.
1902ರಲ್ಲಿ ಉತ್ತರ ಪ್ರದೇಶದ ಮೀರತ್ನಲ್ಲಿ ಹುಟ್ಟಿದ್ದ ಚರಣ್ ಸಿಂಗ್ ಅವರು, ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಾ, ರೈತ ನಾಯಕರಾಗಿದ್ದರು. ಅವರು ಹಲವಾರು ಕೃಷಿ ಸ್ನೇಹಿ ನೀತಿಗಳನ್ನು ರೂಪಿಸಿದ್ದರು. 1987ರಲ್ಲಿ ನಿಧನರಾದರು. ಅವರ ಜನ್ಮ ದಿನಾಚರಣೆಯಂದು ರಾಷ್ಟ್ರೀಯ ರೈತ ದಿನವಾಗಿ ಆಚರಿಸಲಾಗುತ್ತದೆ.
ಈ ನಡುವೆ ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕಳೆದ 28 ದಿನಗಳಿಂದ ರೈತರು ಪ್ರತಿಭಟನೆ ನಡೆಸುತ್ತಲ್ಲಿದ್ದಾರೆ. ಕೇಂದ್ರ ಹಾಗೂ ರೈತ ಮುಖಂಡರುಗಳ ನಡುವೆ ಹಲವು ಸುತ್ತಿನ ಮಾತುಕತೆ ನಡೆದಿದ್ದರೂ ಎಲ್ಲವೂ ವಿಫಲವಾಗಿದೆ.