ಲಕ್ನೋ, ಡಿ.23 (DaijiworldNews/MB) : ಉತ್ತರ ಪ್ರದೇಶದಲ್ಲಿ ಹೊಸದಾಗಿ ರೂಪಿಸಲಾದ ಮತಾಂತರ ವಿರೋಧಿ ಕಾನೂನಿನಡಿಯಲ್ಲಿ ಉತ್ತರ ಪ್ರದೇಶ ಪೊಲೀಸರು ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸುತ್ತಿದ್ದು ಮಹಿಳೆಯರನ್ನು ಇಸ್ಲಾಂಗೆ ಮತಾಂತರಗೊಳಿಸಿದ್ದಕ್ಕಾಗಿ 14 ಮಂದಿ ಹಾಗೂ ಕ್ರೈಸ್ತ ಧರ್ಮವನ್ನು ಸ್ವೀಕರಿಸಲು ಜನರ ಮನವೊಲಿಸಲು ಪ್ರಯತ್ನಿಸಿದ್ದಕ್ಕಾಗಿ ಮೂವರನ್ನು ಬಂಧಿಸಿದ್ದಾರೆ.
ಇತಾಹ್ನಲ್ಲಿ, 21 ವರ್ಷದ ಯುವತಿಯನ್ನು ಬಲವಂತವಾಗಿ ಮತಾಂತರ ಮಾಡಿ ನಂತರ ಮದುವೆಯಾದ ಆರೋಪದ ಮೇಲೆ ಪೊಲೀಸರು ಎಂಟು ಜನರನ್ನು ಬಂಧಿಸಿದ್ದಾರೆ. ಅಜಮ್ಗರ್ನಲ್ಲಿ ಮೂವರನ್ನು ಬಂಧಿಸಿದ್ದಾರೆ.
ಯುವತಿಯ ತಂದೆ, ಉದ್ಯಮಿ ಸಲ್ಲಿಸಿದ ದೂರಿನ ಆಧಾರದ ಮೇಲೆ ನೂತನ ಮತಾಂತರ ವಿರೋಧಿ ಕಾನೂನಿನಡಿಯಲ್ಲಿ ಇತಾಹ್ನಲ್ಲಿ ಜಲೇಶರ್ನಲ್ಲಿ ಗುರುವಾರ ದಾಖಲಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಉಪ ಪೊಲೀಸ್ ವರಿಷ್ಠಾಧಿಕಾರಿ ರಾಮ್ ನಿವಾಸ್ ಸಿಂಗ್, "ಮಂಗಳವಾರ ಎಂಟು ಮಂದಿ ಸೇರಿದಂತೆ ಹದಿನಾಲ್ಕು ಜನರನ್ನು ಈವರೆಗೆ ಬಂಧಿಸಲಾಗಿದೆ. ಮೂರು ಪೊಲೀಸ್ ತಂಡಗಳು ಯುವತಿಯನ್ನು ಹುಡುಕಲು ಪ್ರಯತ್ನಿಸುತ್ತಿವೆ. ಪರಾರಿಯಾಗಿದ್ದವರನ್ನು ಬಂಧಿಸಲಾಗಿವುದು" ಎಂದು ತಿಳಿಸಿದರು.
ನವೆಂಬರ್ 17 ರಿಂದ ಯುವತಿ ನಾಪತ್ತೆಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಜಾವೇದ್ ಪರ ವಕೀಲರಿಂದ ಯುವತಿಯ ಮತಾಂತರ ಹಾಗೂ ನ್ಯಾಯಾಲಯದಲ್ಲಿ ನಡೆದ ವಿವಾಹದ ಬಗ್ಗೆ ಪತ್ರ ದೊರೆತ ಬಳಿಕ ಕುಟುಂಬವು ಗುರುವಾರ ದೂರು ದಾಖಲಿಸಿದೆ.
ಐಪಿಸಿ ಸೆಕ್ಷನ್ 366 ಅಡಿ ಮತ್ತು ಉತ್ತರ ಪ್ರದೇಶ ಕಾನೂನುಬಾಹಿರ ಧರ್ಮ ಪರಿವರ್ತನೆ ಆರ್ಡಿನೆನ್ಸ್, 2020 ರ ಅಡಿಯಲ್ಲಿ ಈ ಪ್ರಕರಣವನ್ನು ದಾಖಲಿಸಲಾಗಿದೆ.
ಹಿಂದೂ ಮಹಿಳೆಯನ್ನು 'ಅಪಹರಿಸಿ ಕಾನೂನುಬಾಹಿರವಾಗಿ ಇಸ್ಲಾಂಗೆ ಮತಾಂತರಗೊಳಿಸಿದ' ಆರೋಪದ ಬಳಿಕ ಜಾವೇದ್ ಪರಾರಿಯಾಗಿದ್ದಾನೆ. ಆತನ ಎಂಟು ಸಂಬಂಧಿಕರ ವಿರುದ್ಧ ಮಂಗಳವಾರ ಪ್ರಕರಣ ದಾಖಲಿಸಲಾಗಿದೆ.
ಇತಾಹ್ ಪೊಲೀಸ್ ಪ್ರಕಾರ, ಮಹಿಳೆ ಸೇರಿದಂತೆ ಎಂಟು ಆರೋಪಿಗಳನ್ನು ಆಗ್ರಾ ಕ್ರಾಸಿಂಗ್ ಬಳಿ ಬಂಧಿಸಲಾಗಿದೆ. ದಂಪತಿಗಳು ಶರಣಾಗುವಂತೆ ಒತ್ತಡ ಹೇರಲು ಇವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆ ದೆಹಲಿಯಲ್ಲಿ ಇರಬಹುದು ಎಂದು ಪೊಲೀಸರು ನಂಬಿದ್ದು, ಆದರೆ ಜಾವೇದ್ ಇನ್ನೂ ಉತ್ತರಪ್ರದೇಶದಲ್ಲಿದ್ದಾನೆ ಹಾಗೆಯೇ ತನ್ನ ಸ್ಥಳವನ್ನು ಬದಲಾಯಿಸುತ್ತಿದ್ದಾನೆ ಎಂದು ಹೇಳಲಾಗಿದೆ.
"ಜಾವೇದ್ ಮತ್ತು ಅವರ ನಾಲ್ವರು ಆಪ್ತರು ಇನ್ನೂ ಪರಾರಿಯಾಗಿದ್ದಾರೆ. ಅವರನ್ನು ಕೂಡ ಶೀಘ್ರದಲ್ಲೇ ಬಂಧಿಸಲಾಗುವುದು" ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹಾಗೆಯೇ ಐವರು ಪುರುಷ ಆರೋಪಿಗಳ ಸುಳಿವು ನೀಡಿದವರಿಗೆ ತಲಾ 25 ಸಾವಿರ ರೂ.ಗಳ ಬಹುಮಾನವನ್ನೂ ಘೋಷಿಸಲಾಗಿದೆ.
ಜಾವೇದ್ ಬಟ್ಟೆ ಅಂಗಡಿಯೊಂದನ್ನು ನಡೆಸುತ್ತಿದ್ದು ಯುವತಿಯ ನೆರೆಮನೆಯವನಾಗಿದ್ದಾನೆ.
ಇನ್ನು ಅಜಮ್ಗರ್ನಲ್ಲಿ ಬಾಲ್ಚಂದ್ರ, ಗೋಪಾಲ್ ಪ್ರಜಾಪತಿ ಮತ್ತು ನೀರಜ್ ಕುಮಾರ್ ಎಂಬವರು ಸಭೆ ಆಯೋಜಿಸಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳಲು ಜನರನ್ನು ಮನವೊಲಿಸುವ ಯತ್ನ ಮಾಡಿದ್ದಕ್ಕಾಗಿ ಪೊಲೀಸರು ಆ ಮೂವರನ್ನು ಬಂಧಿಸಿದ್ದಾರೆ.
ಮೂವರು ಗ್ರಾಮಕ್ಕೆ ಬಂದು ಜನರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳಿಸಲು ತ್ರಿಭುವನ್ ಯಾದವ್ ಅವರ ಮನೆಯಲ್ಲಿ ಸಭೆ ಏರ್ಪಡಿಸಿದ್ದಾರೆ ಎಂದು ದಿದರ್ಗಂಜ್ ಸ್ಟೇಷನ್ ಹೌಸ್ ಆಫೀಸರ್ ಸಂಜಯ್ ಕುಮಾರ್ ಸಿಂಗ್ ಹೇಳಿದ್ದಾರೆ.
ಇನ್ನು ಮತಾಂತರ ವಿರೋಧಿ ಕಾನೂನು ಮೂಲಕ ಪೊಲೀಸರು ಅತಿರೇಕದ ವರ್ತನೆ ತೋರುತ್ತಿದ್ದಾರೆ ಎಂದು ಅಜಮ್ಗರ್ನ ಸಮಾಜ ಸೇವಕ ರಾಜ್ ಕುಮಾರ್ ಕಶ್ಯಪ್ ಆರೋಪಿಸಿದ್ದಾರೆ.
ಅಜಮ್ಗರ್ನಲ್ಲಿ ಬಂಧಿಸಲ್ಪಟ್ಟ ಮೂವರು ಯಾವುದೇ ಮತಾಂತರವಾಗುವಂತೆ ಒತ್ತಾಯ ಮಾಡಿಲ್ಲ. ಯಾವುದೇ ಧರ್ಮದ ಬಗ್ಗೆ ಬೋಧಿಸುವುದು ಅಪರಾಧವಲ್ಲ ಎಂದು ಹೇಳಿದ್ದಾರೆ.