ಬೆಂಗಳೂರು, ಡಿ.23 (DaijiworldNews/MB) : ಇಂದಿನಿಂದ ರಾತ್ರಿ ಕರ್ಫ್ಯೂ ಜಾರಿ ಮಾಡಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.
ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ''ಹೊಸ ಬಗೆಯ ಕೊರೊನಾ ಹಿನ್ನೆಲೆಯಲ್ಲಿ ಇಂದು ರಾತ್ರಿ ಹತ್ತು ಗಂಟೆಯಿಂದ ನಾಳೆ ಬೆಳಗ್ಗೆ 6 ಗಂಟೆಯವರೆಗೆ ರಾತ್ರಿ ಕರ್ಫ್ಯೂ ಹಾಕಲಾಗುವುದು. ಇದು ಜನವರಿ 2 ರ ಬೆಳಿಗ್ಗೆ 6 ಗಂಟೆಯವರೆಗೂ ಜಾರಿಯಲ್ಲಿರುತ್ತದೆ. ಇದು ಇಡೀ ರಾಜ್ಯಕ್ಕೆ ಅನ್ವಯವಾಗುತ್ತದೆ'' ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
''ಹೊರದೇಶದಿಂದ ಬರುವ ಪ್ರತಿಯೊಬ್ಬರು ಆರ್.ಟಿ.-ಪಿ.ಸಿ.ಆರ್. ನೆಗೆಟಿವ್ ವರದಿ ಹೊಂದಿರಬೇಕು. ಹಾಗೆಯೇ ಈ ಪರೀಕ್ಷೆಯನ್ನು 72 ಗಂಟೆಯ (3 ದಿನ) ಒಳಗಾಗಿ ಮಾಡಿಸಿರಬೇಕು'' ಎಂದು ತಿಳಿಸಿದ್ದಾರೆ.
''ಈಗಾಗಲೇ ವಿಮಾನ ನಿಲ್ದಾಣದಲ್ಲಿ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ವಿಮಾನ ನಿಲ್ದಾಣದಲ್ಲಿ ಆರೋಗ್ಯ ಸಿಬ್ಬಂದಿಗಳನ್ನು ನಿಯೋಜನೆ ಮಾಡಿದ್ದೇವೆ'' ಎಂದು ಮಾಹಿತಿ ನೀಡಿದ್ದಾರೆ.