ಬೆಂಗಳೂರು, ಡಿ.23 (DaijiworldNews/MB) : ಬ್ರಿಟನ್ ದೇಶದಲ್ಲಿ ಹೊಸ ಸ್ವರೂಪದ ಕೊರೊನಾ ವೈರಸ್ ಪತ್ತೆಯಾಗಿದ್ದು ಭಾರತಕ್ಕೆ ಬ್ರಿಟನ್ ದೇಶದಿಂದ ಹಲವು ಮಂದಿ ಈಗಾಗಲೇ ಬಂದಿರುವ ಕಾರಣ ಜನರಲ್ಲಿ ಆತಂಕ ಮೂಡಿದೆ. ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಸಲಹೆ ನೀಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯನವರು, ''ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಕ್ಷಣ ಮುನ್ನೆಚ್ಚರಿಕೆಯ ಕ್ರಮಗಳಿಗೆ ಮುಂದಾಗಬೇಕು. ಕಳೆದ ಬಾರಿಯ ನಿರ್ಲಕ್ಷ್ಯದಿಂದಾಗಿರುವ ದುಷ್ಪರಿಣಾಮದ ಪಾಠ ನೆನಪಲ್ಲಿರಲಿ'' ಎಂದು ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ''ಹೊಸ ರೂಪದೊಂದಿಗೆ ಕಾಣಿಸಿಕೊಂಡಿರುವ ಕೊರೊನಾ ವೈರಸ್ ಸೋಂಕಿನ ನಿಯಂತ್ರಣಕ್ಕೆ ತಜ್ಞರ ಸಲಹೆಯೊಂದಿಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಕ್ಷಣ ಮುನ್ನೆಚ್ಚರಿಕೆಯ ಕ್ರಮಗಳಿಗೆ ಮುಂದಾಗಬೇಕು. ಕಳೆದ ಬಾರಿಯ ನಿರ್ಲಕ್ಷ್ಯದಿಂದಾಗಿರುವ ದುಷ್ಪರಿಣಾಮದ ಪಾಠ ನೆನಪಲ್ಲಿರಲಿ'' ಎಂದು ಹೇಳಿದ್ದಾರೆ.
''ರೂಪಾಂತರಿ ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ತಕ್ಷಣ ರಾಜ್ಯದ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರನ್ನು ಕಟ್ಟುನಿಟ್ಟಿನ ಪರೀಕ್ಷಗೆ ಒಳಪಡಿಸಬೇಕು. ಇದರಲ್ಲಿ ರಿಯಾಯಿತಿ, ವಿನಾಯಿತಿ, ನಿರ್ಲಕ್ಷ್ಯ ಸಲ್ಲದು'' ಎಂದಿದ್ದಾರೆ.
''ರೂಪಾಂತರಿ ಕೊರೊನಾ ವೈರಸ್ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ನಿರ್ಲಕ್ಷ್ಯ ಮಾಡದೆ ಕಡ್ಡಾಯವಾಗಿ ಮಾಸ್ಕ್ ಹಾಕಿ, ಸಾನಿಟೈಸರ್ ಬಳಸಿ, ದೈಹಿಕ ಅಂತರ ಕಾಪಾಡಿ ಸಹಕರಿಸಬೇಕು'' ಎಂದು ಮನವಿ ಮಾಡಿದ್ದಾರೆ.