ಬೆಂಗಳೂರು, ಡಿ.23 (DaijiworldNews/MB) : ಬುಧವಾರ ರಾಷ್ಟ್ರೀಯ ರೈತ ದಿನಾಚರಣೆಯಾಗಿದ್ದು ಹಲವು ನಾಯಕರು ರೈತರಿಗೆ ಶುಭಾಶಯ ತಿಳಿಸಿದ್ದಾರೆ. ಈ ನಡುವೆ ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕಳೆದ 28 ದಿನಗಳಿಂದ ರೈತರು ಪ್ರತಿಭಟನೆ ನಡೆಸುತ್ತಲ್ಲಿದ್ದಾರೆ. ಕೇಂದ್ರ ಹಾಗೂ ರೈತ ಮುಖಂಡರುಗಳ ನಡುವೆ ಹಲವು ಸುತ್ತಿನ ಮಾತುಕತೆ ನಡೆದಿದ್ದರೂ ಎಲ್ಲವೂ ವಿಫಲವಾಗಿದೆ.
ಇನ್ನು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯನವರು ರೈತರಿಗೆ ರಾಷ್ಟ್ರೀಯ ರೈತ ದಿನಾಚರಣೆಯ ಶುಭಾಶಯ ತಿಳಿಸಿದ್ದು ''ದೇಶದಲ್ಲಿ ನಡೆಯುತ್ತಿರುವುದು ರೈತ ಪರ ಮತ್ತು ರೈತ ವಿರೋಧಿಗಳ ನಡುವಿನ ಹೋರಾಟ'' ಎಂದು ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯನವರು, ''ದೇಶದಲ್ಲಿ ನಡೆಯುತ್ತಿರುವುದು ರೈತ ಪರ ಮತ್ತು ರೈತ ವಿರೋಧಿಗಳ ನಡುವಿನ ಹೋರಾಟ. ನಮ್ಮ ಕಾಂಗ್ರೆಸ್ ಹಿಂದೆಯೂ ಇಂದು ಮತ್ತು ಮುಂದೆಯೂ ಸದಾ ರೈತರ ಪರ. ಅನ್ನ ತಿನ್ನುವ ನಾವೆಲ್ಲರೂ ಕೃಷಿ ವಿರೋಧಿ ಕಾನೂನುಗಳ ವಿರುದ್ಧದ ರೈತರ ಪ್ರತಿಭಟನೆಗೆ ನಮ್ಮ ದನಿ ಸೇರಿಸೋಣ'' ಎಂದು ಕರೆ ನೀಡಿದ್ದಾರೆ.
ಹಾಗೆಯೇ, ''ಅನ್ನದಾತರಿಗೆ ರಾಷ್ಟ್ರೀಯ ರೈತ ದಿನಾಚರಣೆಯ ಶುಭಾಶಯಗಳು'' ಎಂದು ತಿಳಿಸಿದ್ದಾರೆ.