ಬೆಂಗಳೂರು, ಡಿ.23 (DaijiworldNews/MB) : ''ಬೆಂಗಳೂರಿನಲ್ಲಿ ಸ್ಲಂನಲ್ಲಿರುವ ಮಕ್ಕಳಿಗೆ ಉಚಿತ ಶಿಕ್ಷಣ ದೊರೆಯಬೇಕಾಗಿದ್ದು ಈ ಕಾರ್ಯವನ್ನು ನಾವು ಆದಿಚುಂಚನಗಿರಿ ಶ್ರೀಮಠದಿಂದ ಪ್ರಾರಂಭ ಮಾಡುತ್ತೇವೆ'' ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
ವಿಜಯನಗರದ ಆದಿಚುಂಚನಗಿರಿ ಶ್ರೀಮಠಕ್ಕೆ ಭೇಟಿ ನೀಡಿ, ಡಾ. ನಿರ್ಮಲಾನಂದ ಸ್ವಾಮೀಜಿ ಅವರ ಆಶೀರ್ವಾದ ಪಡೆದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ''ಈಗಾಗಲೇ ಡಾ. ನಿರ್ಮಲಾನಂದನಾಥ ಸ್ವಾಮೀಜಿಯವರು ಸರ್ಕಾರದ ಕಡೆಯಿಂದ ಜಾಗವಿದ್ದರೆ ಸಾಕು ಎಂದು ಹೇಳಿದ್ದಾರೆ. ಹಾಗಾಗಿ ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದು'' ಎಂದು ಹೇಳಿದರು.
''ಇನ್ನು ಕೊರೊನಾದ ಎರಡನೇ ಅಲೆಯ ಭಯ ಯಾರಿಗೂ ಬೇಡ. ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು, ಸ್ಯಾನಿಟೈಸ್ ಬಳಕೆ ಮಾಡುವಂತಹ ಕೇಂದ್ರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ. ಇನ್ನು ನಾಲ್ಕೈದು ತಿಂಗಳು ಹೆಚ್ಚಿನ ಜಾಗ್ರತೆಯಿಂದ ಇರಬೇಕು'' ಎಂದರು.
ಇನ್ನು ''ಡಿಸೆಂಬರ್ 25ರಂದು ವಾಜಪೇಯಿ ಅವರ ಹುಟ್ಟುಹಬ್ಬವಾಗಿದ್ದು ಆ ದಿನವನ್ನು ರೈತರ ದಿನವನ್ನಾಗಿ ನಾವು ಆಚರಿಸುತ್ತಿದ್ದೇವೆ'' ಎಂದು ಕೂಡಾ ತಿಳಿಸಿದರು.