ನವದೆಹಲಿ, ಡಿ.23 (DaijiworldNews/PY): "ಭಾರತವನ್ನು ವೈಜ್ಞಾನಿಕ ಕಲಿಕೆಗೆ ಅತ್ಯಂತ ವಿಶ್ವಾಸಾರ್ಹ ಕೇಂದ್ರವನ್ನಾಗಿ ಮಾಡಲು ತಮ್ಮ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಭಾರತ ಅಂತರಾಷ್ಟ್ರೀಯ ವಿಜ್ಞಾನೋತ್ಸವ 2020ರ ಉದ್ಘಾಟನಾ ಭಾಷಣ ಮಾಡಿದ ಅವರು, "ಭಾರತವು, ವಿಶ್ವ ದರ್ಜೆ ವೈಜ್ಞಾನಿಕ ಪರಿಹಾರೋಪಾಯಗಳನ್ನು ಸಾಧಿಸಲು ಅವಶ್ಯವಿರುವಂತ ದತ್ತಾಂಶ, ಜನಸಂಖ್ಯೆ, ಬೇಡಿಕೆ ಹಾಗೂ ಪ್ರಜಾಪ್ರಭುತ್ವವನ್ನು ಹೊಂದಿದೆ" ಎಂದು ತಿಳಿಸಿದ್ದಾರೆ.
"ಭಾರತವು ವಿಜ್ಞಾನ-ತಂತ್ರಜ್ಞಾನ ಹಾಗೂ ನಾವೀನ್ಯತೆಗಳಲ್ಲಿ ಶ್ರೀಮಂತ ಪರಂಪರೆಯನ್ನು ಹೊಂದಿದೆ. ಯಾವುದೇ ಸವಾಲನ್ನು ಎದುರಿಸಲು ಹಾಗೂ ಸಂಶೋಧನಾ ವಾತಾವರಣವನ್ನು ಸುಧಾರಿಸಲು ಭಾರತ ಸರ್ಕಾರ ಸಿದ್ದವಾಗಿದೆ" ಎಂದಿದ್ದಾರೆ.
"ಎಲ್ಲದಕ್ಕಿಂತ ಪ್ರಮುಖವಾಗಿ ಭಾರತ, ಎಲ್ಲವನ್ನು ಸಮತೋಲನಗೊಳಿಸಲು ಹಾಗೂ ರಕ್ಷಣೆ ಮಾಡಲು ಸದೃಢವಾದ ಪ್ರಜಾಪ್ರಭುತ್ವವನ್ನು ಹೊಂದಿದೆ. ಈ ಹಿನ್ನೆಲೆ ಭಾರತದ ಮೇಲೆ ವಿಶ್ವ ಭರವಸೆಯಿರಿಸಿದೆ" ಎಂದು ಹೇಳಿದ್ದಾರೆ.