National
ಗ್ರಾ. ಪಂ. ಮೊದಲ ಹಂತದ ಚುನಾವಣೆ - ದ.ಕ. ಜಿಲ್ಲೆಯಲ್ಲಿ ಶೇ.75, ಉಡುಪಿಯಲ್ಲಿ ಶೇ. 74.10 ಮತದಾನ
- Tue, Dec 22 2020 10:04:50 PM
-
ಮಂಗಳೂರು / ಉಡುಪಿ, ಡಿ.22 (DaijiworldNews/MB) : ಡಿಸೆಂಬರ್ 22 ರ ಮಂಗಳವಾರ ನಡೆದ ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ದಕ್ಷಿಣ ಕನ್ನಡದಲ್ಲಿ ಒಟ್ಟಾರೆ ಶೇ .75 ರಷ್ಟು ಹಾಗೂ ಉಡುಪಿ ಜಿಲ್ಲೆಯಲ್ಲಿ ಶೇ 74.10 ರಷ್ಟು ಮತದಾನವಾಗಿದೆ.
ತಾಲ್ಲೂಕುವಾರು ಮತದಾನದ ಶೇಕಡಾವಾರು ಪ್ರಮಾಣ ಹೀಗಿದೆ: ಮಂಗಳೂರು ಶೇ. 72.23, ಮೂಡುಬಿದಿರೆ ಶೇ.77.77, ಬಂಟ್ವಾಳ ಶೇ. 72.82 ಒಟ್ಟಾರೆಯಾಗಿ ಶೇ. 75 ಮತದಾನವಾಗಿದೆ. ಉಡುಪಿಯಲ್ಲಿ ಶೇ. 74.8, ಹೆಬ್ರಿಯಲ್ಲಿ ಶೇ. 79.41, ಬ್ರಹ್ಮಾವರದಲ್ಲಿ ಶೇ. 73.79 ಹಾಗೂ ಬೈಂದೂರಿನಲ್ಲಿ ಶೇ. 71.28 ಒಟ್ಟಾರೆಯಾಗಿ 74.10 ಮತದಾನವಾಗಿದೆ.
ಬೆಳಿಗ್ಗೆ 9 ಗಂಟೆಗೆ ತಾಲ್ಲೂಕುವಾರು ಮತದಾನದ ಶೇಕಡಾವಾರು ಪ್ರಮಾಣ: ಮಂಗಳೂರು 14.6%, ಮೂಡುಬಿದಿರೆ 15.64%, ಮತ್ತು ಬಂಟ್ವಾಳ 13.75% ಒಟ್ಟು 14.48%, ಉಡುಪಿ 15.87%, ಹೆಬ್ರಿ 15.47%, ಬ್ರಹ್ಮಾವರ 16.49% ಮತ್ತು ಬೈಂದೂರು 11.49% ಒಟ್ಟು 14.37% ಆಗಿತ್ತು.
ಬೆಳಿಗ್ಗೆ 11 ಗಂಟೆಗೆ ಮತದಾನ ಪ್ರಮಾಣ: ಮಂಗಳೂರು ಶೇ. 31.87, ಮೂಡುಬಿದಿರೆ ಶೇ.32.80, ಬಂಟ್ವಾಳ ಶೇ. 34.58 ಒಟ್ಟಾರೆಯಾಗಿ ಶೇ. 33.93 ಮತದಾನವಾಗಿದೆ. ಉಡುಪಿಯಲ್ಲಿ ಶೇ.33, ಹೆಬ್ರಿಯಲ್ಲಿ ಶೇ. 34, ಬ್ರಹ್ಮಾವರದಲ್ಲಿ ಶೇ. 33 ಹಾಗೂ ಬೈಂದೂರಿನಲ್ಲಿ ಶೇ.28 ಒಟ್ಟಾರೆಯಾಗಿ 32.20 ಮತದಾನವಾಗಿದೆ.
ಅಲೆಮಾರಿ-ಅರೆ ಅಲೆಮಾರಿ ಜನಾಂಗದ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಇವರು ಹರೇಕಳ ರಾಜಗುಡ್ಡೆ ಶಾಲೆಯಲ್ಲಿ ತಮ್ಮ ಹಕ್ಕನ್ನು ಚಲಾಯಿಸಿದರು. ಹುಟ್ಟೂರಿನ ಬೂತ್ ಗಳಲ್ಲಿ ಪಕ್ಷದ ಕಾರ್ಯಕರ್ತರ ಜತೆಗಿದ್ದು, ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಹುರಿದುಂಬಿಸಿದರು. ಈ ವೇಳೆ ಮಾತನಾಡಿದ ಅವರು, ''ಕೇಂದ್ರ ಹಾಗೂ ರಾಜ್ಯ ಸರಕಾರಗಳ ಪಂಚಾಯಿತಿವರೆಗಿನ ಅಭಿವೃದ್ಧಿ ಕಾರ್ಯಗಳನ್ನು ನೋಡಿರುವ ಜನತೆ ತಮ್ಮ ಉತ್ತಮ ಭವಿಷ್ಯಕ್ಕಾಗಿ ಉತ್ತಮ ಅಭ್ಯರ್ಥಿಯನ್ನು ಬೆಂಬಲಿಸಲಿದ್ದಾರೆ'' ಎಂದರು.
ದ ಮೈಸೂರ್ ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿ. ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್ ತಮ್ಮ ಮತದಾನದ ಹಕ್ಕನ್ನು ಪಾನೇಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚಲಾಯಿಸಿದರು. ಬಳಿಕ ಬೋಳಿಯಾರು ಬೂತ್ ನಲ್ಲಿ ಕುಳಿತು ಪಕ್ಷದ ಬೆಂಬಲಿತ ಸದಸ್ಯರಿಗೆ ಉತ್ಸಾಹ ತುಂಬಿದರು. ಬಳಿಕ ಮಾತನಾಡಿದ ಅವರು, ''ಮಂಗಳೂರು ಕ್ಷೇತ್ರದ 12 ಗ್ರಾ.ಪಂಗಳು ಈ ಬಾರಿ ಪಕ್ಷದ ಬೆಂಬಲಿತ ಸದಸ್ಯರೇ ಆಯ್ಕೆಯಾಗಲಿದ್ದು, ಆಡಳಿತವನ್ನು ನಡೆಸಲಿದ್ದಾರೆ. ಕಾಂಗ್ರೆಸ್ ಪಕ್ಷದ ದುರಾಡಳಿತ ಹಾಗೂ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಲ್ಲಿ ಶಾಸಕರ ತಾರತಮ್ಯವನ್ನು ಗಮನಿಸಿರುವ ಜನತೆ ಈ ಬಾರಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನೇ ಆಯ್ಕೆ ಮಾಡಲಿದ್ದಾರೆ'' ಎಂದರು.
ಮಂಗಳೂರು ಕ್ಷೇತ್ರದ ಶಾಸಕರು ಹಾಗೂ ಮಾಜಿ ಸಚಿವ ಯು.ಟಿ ಖಾದರ್ ಬೋಳಿಯಾರಿನ ರಂತಡ್ಕ ಜಿ.ಪಂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತ ಚಲಾಯಿಸಿದರು. ಪತ್ನಿ ಜತೆಗೆ ಆಗಮಿಸಿದ ಶಾಸಕರು ಮತದಾರರ ಜತೆಗೆ ಸರತಿ ಸಾಲಿನಲ್ಲಿ ನಿಂತೇ ಮತದಾನ ನಡೆಸಿದರು. ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ''ಕೇಂದ್ರ ಹಾಗೂ ರಾಜ್ಯ ಸರಕಾರದ ದುರಾಡಳಿತಕ್ಕೆ ಬೇಸತ್ತಿರುವ ಜನತೆ ಉತ್ತಮ ಫಲಿತಾಂಶವನ್ನು ನೀಡಲಿದ್ದಾರೆ. ರಾಜ್ಯದಾದ್ಯಂತ ಕಾಂಗ್ರೆಸ್ ಬೆಂಬಲಿತರೇ ಮೇಲುಗೈ ಸಾಧಿಸಲಿದ್ದಾರೆ'' ಎಂದರು.
ಕುತ್ತಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತದಾನ ಕೇಂದ್ರದಲ್ಲಿ ಬೆಳಗ್ಗಿನ ಹೊತ್ತಿನಲ್ಲಿ ವಿದ್ಯುತ್ ಇಲ್ಲದೇ ಅಧಿಕಾರಿಗಳು ಪರದಾಡಬೇಕಾಯಿತು. ಮೊಬೈಲ್ ಟಾರ್ಚ್ ಮತ್ತು ಕ್ಯಾಂಡಲ್ ಹಿಡಿದುಕೊಂಡು ವೋಟರ್ ಲಿಸ್ಟನ್ನು ನೋಡಬೇಕಾದ ಅನಿವಾರ್ಯತೆ ಎದುರಾಯಿತು. ಈ ಕುರಿತು ಗಮನಹರಿಸಿದ ಮಂಗಳೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್, ಮೆಸ್ಕಾಂ ಇಲಾಖೆಯ ಗಮನಕ್ಕೆ ತಂದಿದ್ದು, ಕೂಡಲೇ ಇಲಾಖೆ ಸ್ಪಂಧಿಸಿ ವಿದ್ಯುತ್ ನೀಡಿದೆ.
ಹರೇಕಳ ಶ್ರೀ ರಾಮಕೃಷ್ಣ ಶಾಲೆಯ ಮತದಾನ ಕೇಂದ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಜಮಾಯಿಸಿದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ಕಾನೂನಿನಂತೆ ಗುಂಪು ಚದುರಿಸಲು ಲಘು ಲಾಠಿ ಪ್ರಹಾರ ನಡೆಸಿದರು.
ರಾಜ್ಯದ ಗ್ರಾಮ ಪಂಚಾಯಿತಿ ಚುನಾವಣೆಯ ಮೊದಲ ಹಂತದಲ್ಲಿ ಮಂಗಳೂರು, ಬಂಟ್ವಾಳ ಮತ್ತು ಮೂಡುಬಿದಿರೆ ತಾಲ್ಲೂಕು ವ್ಯಾಪ್ತಿಯಲ್ಲಿರುವ ಗ್ರಾಮ ಪಂಚಾಯಿತಿಗಳಲ್ಲಿ ಮಂಗಳವಾರ ಬೆಳಿಗ್ಗೆ 7 ಗಂಟೆಗೆ ಮತದಾನ ಪ್ರಕ್ರಿಯೆ ಆರಂಭವಾಗಿತ್ತು ದಕ್ಷಿಣ ಕನ್ನಡ ಜಿಲ್ಲೆಯ 106 ಗ್ರಾಮ ಪಂಚಾಯಿತಿಗಳು ಚುನಾವಣೆಯನ್ನು ಎದುರಿಸಿದೆ. ಒಟ್ಟು 1,681 ಕ್ಷೇತ್ರಗಳಲ್ಲಿ 1,631 ಮತದಾನ ನಡೆದಿದ್ದು, 50 ಮಂದಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಸ್ಯಾನಿಟೈಸರ್ ಬಳಸಿ, ಮಾಸ್ಕ್ ಧರಿಸಿ ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಮತದಾರರು ಮತ ಚಲಾಯಿಸಲಾಗಿದೆ. ಆಶಾ ಕಾರ್ಯಕರ್ತರು ಥರ್ಮಲ್ ಸ್ಕ್ಯಾನಿಂಗ್ ಮಾಡಿ ಮತದಾರರಿಗೆ ಬೂತ್ಗಳಿಗೆ ಪ್ರವೇಶಕ್ಕೆ ಅವಕಾಶ ನೀಡಿದರು.
ಜಿಲ್ಲೆಯ ತಲಪಾಡಿಯಲ್ಲಿರುವ ಸರ್ಕಾರಿ ಪ್ರೌಢ ಶಾಲೆಯಲ್ಲಿರುವ ಮತಗಟ್ಟೆ ಸಂಖ್ಯೆ 246 ಎ ಯಲ್ಲಿ 829 ಮತದಾರರಲ್ಲಿ 140 ಮಂದಿ ಬೆಳಿಗ್ಗೆ 9.30 ರ ವೇಳೆಗೆ ಮತ ಚಲಾಯಿಸಿದ್ದಾರೆ. 247 ರ ಮತದಾನ ಕೇಂದ್ರದಲ್ಲಿ 754 ರಲ್ಲಿ 162 ಮಂದಿ ಮತ ಚಲಾಯಿಸಿದ್ದು, ಶೇಕಡಾ 21 ರಷ್ಟು ಮತದಾನವಾಗಿದೆ.
ಬಂಟ್ವಾಳ ತಾಲ್ಲೂಕಿಗೆ ಸಂಬಂಧಿಸಿದ ಪಂಚಾಯತ್ ಚುನಾವಣೆಯಲ್ಲಿ ತಮ್ಮ ಪಕ್ಷಕ್ಕೆ ದೈವಿಕ ಬೆಂಬಲ ಕೋರಿ, ಮಾಜಿ ಸಚಿವ ಬಿ ರಾಮನಾಥ್ ರೈ, ಬಂಟ್ವಾಳ ವೆಂಕಟರಮಣ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆಯನ್ನು ಅರ್ಪಿಸಿದರು. ಕಳ್ಳಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ತೊಡಂಬಿಲ ಶಾಲೆಯ ಮತ ಗಟ್ಟೆಯಲ್ಲಿ ಮತ ಚಲಾಯಿಸಿದ್ದಾರೆ.
ಕೊರೊನಾ ವೈರಸ್ ಹಿನ್ನೆಲೆ ಸರ್ಕಾರ ಚುನಾವಣೆಗೆ ಹಿಂಜರಿದಿತ್ತು. ಆದರೆ ಹೈಕೋರ್ಟ್ ಆದೇಶದಂತೆ ಗ್ರಾಮ ಪಂಚಾಯಿತಿ ಚುನಾವಣೆ ನಡೆಸಲಾಗಿದೆ. ಸಾಂಕ್ರಾಮಿಕ ಭೀತಿಯಿಂದಾಗಿ ಚುನಾವಣೆಯಲ್ಲಿ ಮತದಾನ ಕಡಿಮೆ ಇರಬಹುದು ಎಂದು ನಿರೀಕ್ಷಿಸಲಾಗಿದ್ದರೂ, ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಲು ಜನರು ಉತ್ಸಾಹವನ್ನು ಪ್ರದರ್ಶಿಸಿದರು.