ಉಳ್ಳಾಲ, ಡಿ.22 (DaijiworldNews/MB) : ಹರೇಕಳ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಮತಗಟ್ಟೆ ಎದುರು ಎಸ್ಡಿಪಿಐ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದ ಘಟನೆಗೆ ಸಂಬಂಧಿಸಿ ಶಾಸಕ ಯು.ಟಿ ಖಾದರ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕೊಣಾಜೆ ಠಾಣೆಗೆ ಮುತ್ತಿಗೆ ಹಾಕಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತರು ಬೂತ್ ಬಳಿ ಜಮಾಯಿಸಿ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆಂದು ಆರೋಪಿಸಿ ಎಸ್ಡಿಪಿಐ ಕಾರ್ಯಕರ್ತರು ಮಾತಿಗೆ ಇಳಿದಿದ್ದರು. ಈ ವೇಳೆ ಇತ್ತಂಡಗಳ ನಡುವೆ ವಾಗ್ವಾದ ನಡೆದು ಹೊಯ್ಕೈಗೆ ತಲುಪಿತ್ತು. ಇತ್ತಂಡಗಳನ್ನು ಚದುರಿಸಲು ಸ್ಥಳದಲ್ಲಿದ್ದ ಪೊಲೀಸರು ಲಾಠಿಚಾಜ್೯ ನಡೆಸಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿ ಆರೋಪಿತ ಎಸ್ಡಿಪಿಐ ಕಾರ್ಯಕರ್ತರನ್ನು ಬಂಧಿಸುವಂತೆ ಆಗ್ರಹಿಸಿ ಶಾಸಕ ಯು.ಟಿ ಖಾದರ್ ನೇತೃತ್ವದಲ್ಲಿ ಮುತ್ತಿಗೆ ನಡೆಸಿದ್ದಾರೆ.
''ಬಿಜೆಪಿ ಬೆಂಬಲಿತ ಎಸ್ಡಿಪಿಐ ಗೂಂಡಾಗಳಿಂದ ಈ ಕೃತ್ಯ ನಡೆದಿದೆ'' ಎಂದು ಕ್ಷೇತ್ರ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ ಅಸೈಗೋಳಿ ಆರೋಪಿಸಿದ್ದಾರೆ.
ಹಾಗೆಯೇ ನಾಳೆ ಸಂಜೆಯೊಳಗೆ ಬಂಧಿಸದೇ ಇದ್ದಲ್ಲಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.