ಬೆಂಗಳೂರು, ಡಿ.22 (DaijiworldNews/MB) : ''ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕಾಗಿ ಮುಂದಿನ ವರ್ಷ ಜನವರಿ 15 ರಿಂದ ಫೆಬ್ರವರಿ 27 ರವರೆಗೆ ಕರ್ನಾಟಕದಲ್ಲಿ ಮನೆ ಮನೆಗೆ ತೆರಳಿ ನಿಧಿಸಂಗ್ರಹಣೆ ಆರಂಭಿಸಲು ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಐದು ಲಕ್ಷಕ್ಕೂ ಹೆಚ್ಚು ಸ್ವಯಂಸೇವಕರನ್ನು ಸಿದ್ದಗೊಳಿಸಲಾಗುವುದು'' ಎಂದು ವಿಎಚ್ಪಿಯ ಅಧ್ಯಕ್ಷ ಅಲೋಕ್ ಕುಮಾರ್ ಮಂಗಳವಾರ ತಿಳಿಸಿದರು.
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ನಿಧಿ ಸಮರ್ಪನ ಅಭಿಯಾನದ ಮುಖ್ಯಸ್ಥರೂ ಆಗಿರುವ ಕುಮಾರ್, ''ವಿಎಚ್ಪಿ ತಲಾ ಐದು ಸ್ವಯಂಸೇವಕರನ್ನು ಒಳಗೊಂಡ ಒಂದು ಲಕ್ಷ ಗುಂಪುಗಳನ್ನು ರಚಿಸಲಿದ್ದು, ಅವರು ರಾಜ್ಯದ 27,500 ಗ್ರಾಮಗಳಿಗೆ ತೆರಳಿ 90 ಲಕ್ಷ ಭಕ್ತರನ್ನು ಸಂಪರ್ಕಿಸಲಿದ್ದಾರೆ'' ಎಂದು ತಿಳಿಸಿದರು.
''ನಿಧಿಸಂಗ್ರಹದ ಯೋಜನೆಗಳನ್ನು ವಿವರಿಸಿದ ಕುಮಾರ್, ನಿಧಿ ಸಂಗ್ರಹಣೆಯ ಮೇಲ್ವಿಚಾರಣೆಗೆ ರಾಜ್ಯದಲ್ಲಿ ಶ್ರೀ ರಾಮ ಮಂದಿರ ನಿಧಿ ಸಮರ್ಪನ ಅಭಿಯಾನ ಸಮಿತಿ ಎಂಬ ಸಮಿತಿಯನ್ನು ರಚಿಸಲಾಗಿದೆ'' ಎಂದು ಹೇಳಿದರು.
ಕುಮಾರ್ ಪ್ರಕಾರ, ಉಡುಪಿ ಪೇಜಾವರ ಮಠದ ಸ್ವಾಮಿ ಶ್ರೀ ವಿಶ್ವ ಪ್ರಸನ್ನ ತೀರ್ಥರು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಟ್ರಸ್ಟಿಯಾಗಿದ್ದಾರೆ. ನಾ. ತಿಪ್ಪೇಸ್ವಾಮಿ, ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳನ್ನು ಒಳಗೊಂಡ ಆರ್ಎಸ್ಎಸ್ನ ದಕ್ಷಿಣ ಮಧ್ಯ ಕ್ಷೇತ್ರದ ಕ್ಷೇತ್ರೀಯ ಕಾರ್ಯವಾಹಕ, ಶ್ರೀ ರಾಮ ಜನ್ಮಭೂಮಿ ಮಂದಿರ ನಿರ್ಮಾನ ನಿಧಿ ಸಮರ್ಪನ ಸಮಿತಿಯ ಕಾರ್ಯದರ್ಶಿಯಾಗಲಿದ್ದಾರೆ.
''10, 100 ರೂ, 1,000 ರೂ.ಗಳಂತೆ ಹಣವನ್ನು ಸಂಗ್ರಹಿಸಲಾಗುವುದು ಹಾಗೂ 2,000 ರೂ.ಗಿಂತ ಹೆಚ್ಚಿನ ಹಣವನ್ನು ದಾನ ಮಾಡುವವರಿಗೆ ರಶೀದಿ ಇರುತ್ತದೆ''ಎಂದು ಕುಮಾರ್ ಮಾಹಿತಿ ನೀಡಿದರು.
''ಈ ರೀತಿ ಸಂಗ್ರಹಿಸಿದ ಹಣವನ್ನು ಠೇವಣಿದಾರರಿಗೆ ಹಸ್ತಾಂತರಿಸಲಾಗುವುದು, ಅವರು ಸಂಪೂರ್ಣ ಹಣವನ್ನು 48 ಗಂಟೆಗಳ ಒಳಗೆ ಗೊತ್ತುಪಡಿಸಿದ ಬ್ಯಾಂಕ್ ಖಾತೆಗಳಲ್ಲಿ ಜಮಾ ಮಾಡುತ್ತಾರೆ'' ಎಂದು ತಿಳಿಸಿದರು.
"ಪ್ರತಿ ಠೇವಣಿದಾರರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ ಎಂಬ ಮೂರು ಬ್ಯಾಂಕುಗಳ ಹತ್ತಿರದ ಶಾಖೆಯಲ್ಲಿ ನೋಂದಾಯಿತ ಕೋಡ್ ಸಂಖ್ಯೆಯನ್ನು ಹೊಂದಿರುತ್ತಾರೆ. ಸಂಗ್ರಹಣೆಯಲ್ಲಿ ಸಂಪೂರ್ಣ ಪಾರದರ್ಶಕತೆಯನ್ನು ಕಾಪಾಡಿಕೊಳ್ಳಲಾಗುವುದು" ಎಂದು ಅವರು ಹೇಳಿದರು.
''ದೇವಾಲಯದ ಜೊತೆಗೆ ಗ್ರಂಥಾಲಯ, ದಾಖಲೆಗಳು, ವಸ್ತು ಸಂಗ್ರಹಾಲಯ, ಸಂಶೋಧನಾ ಕೇಂದ್ರ, ಯಜ್ಞಶಾಲ, ವೇದ ಪಾಠಶಾಲ (ಧರ್ಮಗ್ರಂಥಗಳ ಶಾಲೆ), ಸತ್ಸಂಗ್ ಭವನ (ಆಧ್ಯಾತ್ಮಿಕ ಸಭೆಯ ಸಭಾಂಗಣ), ಪ್ರಸಾದ ವಿತರಣಾ ಕೇಂದ್ರ, 108 ಎಕರೆ ಭೂಮಿಯಲ್ಲಿ ಆಂಫಿಥಿಯೇಟರ್, ಧರ್ಮಶಾಲಾ (ಉಳಿದುಕೊಳ್ಳಲು ಸ್ಥಳ), ಪ್ರದರ್ಶನ ಮತ್ತು ಅಂತರರಾಷ್ಟ್ರೀಯ ಗುಣಮಟ್ಟದ ಇತರ ಸೌಲಭ್ಯಗಳು ಇರಲಿದೆ'' ಎಂದರು.
''ಅಭಿಯಾನದ ಸಂಕ್ಷಿಪ್ತ ವಿವರ ಮತ್ತು ವಸ್ತುಗಳನ್ನು ಒಳಗೊಂಡ ಸಾಕ್ಷ್ಯಚಿತ್ರವನ್ನು ಸಿದ್ಧಪಡಿಸಲು ನಾವು ಕ್ರಮ ಕೈಗೊಂಡಿದ್ದೇವೆ ಅಭಿಯಾನದ ಪ್ರಚಾರ ಬಾಲಿವುಡ್ ಸೂಪರ್ಸ್ಟಾರ್ ಅಕ್ಷಯ್ ಕುಮಾರ್ ಅವರು ನಡೆಸಲಿದ್ದಾರೆ'' ಎಂದು ಹೇಳಿದರು.