ನವದೆಹಲಿ, ಡಿ.22 (DaijiworldNews/MB) : ''ಬ್ರಿಟನ್ನಲ್ಲಿ ಪತ್ತೆಯಾದ ಹೊಸ ಸ್ವರೂಪದ ಕೊರೊನಾ ವೈರಸ್ ಭಾರತದಲ್ಲಿ ಪತ್ತೆಯಾಗಿಲ್ಲ, ಯಾವುದೇ ಭೀತಿ ಬೇಡ'' ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಎನ್ಐಟಿಐ ಆಯೋಗದ ಸದಸ್ಯ(ಆರೋಗ್ಯ) ಡಾ. ವಿ ಕೆ ಪಾಲ್, ''ಪ್ರಸ್ತುತ ಲಭ್ಯವಾದ ಮಾಹಿತಿಯ ಪ್ರಕಾರ ರೂಪಾಂತರಿತ ವೈರಸ್ ಬಗ್ಗೆ ಭಯಪಡುವ ಅಗತ್ಯವಿಲ್ಲ. ಆದರೆ ಜಾಗರೂಕತೆ ಅತ್ಯಗತ್ಯ. ಈ ಹೊಸ ಸವಾಲನ್ನು ನಾವು ಸಮಗ್ರ ಪ್ರಯತ್ನಗಳ ಮೂಲಕ ಎದುರಿಸಬೇಕಾಗಿದೆ'' ಎಂದು ತಿಳಿಸಿದರು.
''ಭಾರತದಲ್ಲಿ ರೂಪಾಂತರಿತ ಕೊರೊನಾವೈರಸ್ ಪತ್ತೆಯಾಗಿಲ್ಲ'' ಎಂದು ತಿಳಿಸಿದ ಅವರು, ''ಬ್ರಿಟನ್ನಲ್ಲಿ ಪತ್ತೆಯಾದ ರೂಪಾಂತರಿತ ಎಸ್ಎಆರ್ಎಸ್-ಕೋವಿಡ್-2 ಅಭಿವೃದ್ಧಿ ಪಡಿಸಿರುವ ಲಸಿಕೆಗಳ ಸಾಮರ್ಥ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ'' ಎಂದು ಹೇಳಿದರು.
ಇನ್ನು ರೂಪಾಂತರಿತ ವೈರಸ್ಗೆ ಚಿಕಿತ್ಸೆಯ ಮಾರ್ಗಸೂಚಿಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ. ಇದು ದೇಶದಲ್ಲಿ ಅಭಿವೃದ್ಧಿ ಪಡಿಸುತ್ತಿರುವ ಲಸಿಕೆಗಳ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ'' ಎಂದು ತಿಳಿಸಿದರು. ಹಾಗೆಯೇ, ''ರೂಪಾಂತರಿತ ವೈರಸ್ ಹೆಚ್ಚು ಸಾಂಕ್ರಾಮಿಕವಾಗಬಹುದು ಹಾಗೂ ಜನರಿಗೆ ಸುಲಭವಾಗಿ ಹರಡಬಹುದು" ಎಂದು ಕೂಡಾ ಹೇಳಿದರು.