ಕೊಲ್ಕತ್ತಾ, ಡಿ.22 (DaijiworldNews/MB) : ವಿವಾಹದ ಬಳಿಕ ವಯಸ್ಕ ಮಹಿಳೆಯು ಸ್ವಇಚ್ಛೆಯಿಂದ ಮತ್ತೊಂದು ಧರ್ಮಕ್ಕೆ ಮತಾಂತರವಾದರೆ ನ್ಯಾಯಾಲಯಗಳು ಹಸ್ತಕ್ಷೇಪ ಮಾಡುವಂತಿಲ್ಲ ಎಂದು ಕೊಲ್ಕತ್ತಾ ಹೈಕೋರ್ಟ್ ಸೋಮವಾರ ತಿಳಿಸಿದೆ.
ನಾಪತ್ತೆಯಾಗಿರುವ 19 ವರ್ಷದ ಪುತ್ರಿಯನ್ನು ಪತ್ತೆ ಮಾಡುವಂತೆ ವ್ಯಕ್ತಿಯೊಬ್ಬರು ಕೋರ್ಟ್ಗೆ ಸಲ್ಲಿಸಿದ್ದ ಅಪೀಲಿನ ವಿಚಾರಣೆ ಕೈಗೆತ್ತಿಕೊಂಡ ಜಸ್ಟಿಸ್ ಸಂಜಿಬ್ ಬ್ಯಾನರ್ಜಿ ಹಾಗೂ ಜಸ್ಡಿಸ್ ಅರಿಜಿತ್ ಬ್ಯಾನರ್ಜಿ ಅವರನ್ನು ಒಳಗೊಂಡ ದ್ವಿ ಸದಸ್ಯ ಪೀಠವು, ''ವಿವಾಹದ ಬಳಿಕ ವಯಸ್ಕ ಮಹಿಳೆ ಸ್ವಇಚ್ಛೆಯಿಂದ ಮತಾಂತರವಾದರೆ ನ್ಯಾಯಾಲಯ ಹಸ್ತಕ್ಷೇಪ ನಡೆಸುವಂತಿಲ್ಲ'' ಎಂದು ಹೇಳಿದ್ದಾರೆ.
ನಾಪತ್ತೆಯಾಗಿದ್ದ ಯುವತಿ ವಿವಾಹವಾಗಿದ್ದು ಪತಿಯ ಧರ್ಮಕ್ಕೆ ಮತಾಂತರವಾಗಿದ್ದಳು. ಹಾಗೆಯೇ ನಾನು ಸ್ವಂತ ಇಚ್ಛೆಯಿಂದ ಮತಾಂತರಗೊಂಡಿದ್ದೇನೆ. ನಾನು ಹೆತ್ತವರ ಮನೆಗೆ ಹೋಗುವುದಿಲ್ಲ ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದಳು. ಆದರೆ ತಂದೆ ಆಕೆ ಒತ್ತಡಕ್ಕೆ ಒಳಗಾಗಿ ಈ ಹೇಳಿಕೆ ನೀಡಿದ್ದಾಳೆ ಎಂದು ಸಂಶಯ ವ್ಯಕ್ತಪಡಿಸಿದ್ದು ಈ ಹಿನ್ನೆಲೆ ಮ್ಯಾಜಿಸ್ಟ್ರೇಟ್ ಮುಂದೆ ಎರಡನೇ ಹೇಳಿಕೆ ನೀಡಿದ ಯುವತಿ ನಾನು ಯಾರದ್ದೇ ಒತ್ತಡ ಅಥವಾ ಪ್ರಭಾವಕ್ಕೆ ಒಳಗಾಗಿಲ್ಲ ಎಂದು ತಿಳಿಸಿದ್ದಳು. ಆದರೂ ತಂದೆಗೆ ಈ ಬಗ್ಗೆ ಸಂಶಯ ವ್ಯಕ್ತವಾಗಿದೆ ಎಂದು ಹೇಳಲಾಗಿದೆ.
ಈ ಪ್ರಕರಣದ ವಿಚಾರಣೆ ನಡೆಸಿದ ಪೀಠವು, "ಆಕೆಗೆ 19 ವರ್ಷ ಪ್ರಾಯವಾಗಿದ್ದು ಆಕೆ ತನಗೆ ಇಷ್ಟವಾದವರನ್ನು ವಿವಾಹವಾಗಿದ್ದಾಳೆ. ಆಕೆಯೇ ತನ್ನ ಹೆತ್ತವರ ಬಳಿ ವಾಪಾಸ್ ಬರಲು ಇಚ್ಛೆಯಿಲ್ಲ ಎಂದು ತಿಳಿಸಿದ್ದಾಳೆ. ಹಾಗಾಗಿ ವಯಸ್ಕ ಮಹಿಳೆಯೊಬ್ಬಳು ಆಕೆಯ ಇಚ್ಛೆಯಂತೆ ವಿವಾಹವಾಗಿ ನಂತರ ಮತಾಂತರಗೊಳ್ಳಲು ನಿರ್ಧರಿಸಿ ಹಾಗೂ ಹೆತ್ತವರ ಮನೆಗೆ ವಾಪಸಾಗದೇ ಇರಲು ನಿರ್ಧರಿಸಿದರೆ ಈ ಬಗ್ಗೆ ನ್ಯಾಯಾಲಯ ಹಸ್ತಕ್ಷೇಪ ನಡೆಸಲಾಗದು'' ಎಂದು ಸ್ಪಷ್ಟಪಡಿಸಿದೆ.
ಇನ್ನು ತಂದೆಗೆ ಇನ್ನು ಸಂಶಯವಿರುವ ನಿಟ್ಟಿನಲ್ಲಿ ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಸಾಯ್ಬುಲ್ ಬಾಪುಲಿ ಅವರು ಈ ಕುರಿತು ನ್ಯಾಯಾಲಯಕ್ಕೆ ಡಿಸೆಂಬರ್ 24ರಂದು ವರದಿ ಸಲ್ಲಿಸಲು ಸಹಾಯವಾಗುವಂತೆ ಬಾಪುಲಿ ಅವರನ್ನು ಕಚೇರಿಯಲ್ಲಿ ಭೇಟಿಯಾಗುವಂತೆ ಯುವತಿಗೆ ಸೂಚನೆ ನೀಡಲಾಗಿದೆ.