ರಾಮನಗರ, ಡಿ.22 (DaijiworldNews/MB) : ''ಜೆಡಿಎಸ್ನವರು ದಡ್ಡರಲ್ಲ, ಅವರಿಗೆ ಅವರದ್ದೇ ಆದ ಅನುಭವವಿದೆ'' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಅವರು ಕನಕಪುರ ತಾಲ್ಲೂಕಿನ ದೊಡ್ಡಾಲಹಳ್ಳಿ ಗ್ರಾಮದಲ್ಲಿ ಮಂಗಳವಾರ ಪತ್ನಿ ಉಷಾರೊಂದಿಗೆ ಮತದಾನ ಮಾಡಿ ಬಳಿಕ ಮಾಧ್ಯಮದೊಂದಿಗೆ ಮಾತನಾಡಿ, ''ಜೆಡಿಎಸ್–ಬಿಜೆಪಿ ಮೈತ್ರಿ ವಿಚಾರ ಅವರಿಗೆ ಬಿಟ್ಟದ್ದು, ಅದಕ್ಕೆ ನಾವು ತಲೆ ಕೆಡಿಸಿಕೊಳ್ಳಲ್ಲ. ಅಷ್ಟಕ್ಕೂ ಜೆಡಿಎಸ್ನವರು ದಡ್ಡರೇನಲ್ಲ'' ಎಂದರು.
''ಜೆಡಿಎಸ್ನವರು ಯಾವ ನಿರ್ಧಾರ ಬೇಕಾಗರೂ ಕೈಗೊಳ್ಳಲಿ. ಅವರ ನಿರ್ಧಾರದಿಂದ ಕಾಂಗ್ರೆಸ್ಗೆ ಯಾವುದೇ ನಷ್ಟ ಉಂಟಾಗಲ್ಲ. ನಮಗೆ ನಮ್ಮ ಪಕ್ಷದ ಕಾರ್ಯಕರ್ತರಷ್ಟೇ ಮುಖ್ಯ'' ಎಂದು ಹೇಳಿದರು.
''ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು. ದೇಶದಲ್ಲಿ ಬಹಳಷ್ಟು ರಾಜಕೀಯ ಬದಲಾವಣೆ ಉಂಟಾಗಿದೆ. ರಾಜಸ್ಥಾನ, ಮಹಾರಾಷ್ಟ್ರ, ಬಿಹಾರದಲ್ಲಿಯೂ ರಾಜಕೀಯ ಬದಲಾವಣೆಯಾಗಿದೆ'' ಎಂದರು.
ಇನ್ನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ನಾನು ಸೋಲಲು ಕಾಂಗ್ರೆಸ್ನ ಕೆಲವರೂ ಕಾರಣ ಎಂಬ ಸಿದ್ದರಾಮಯ್ಯನವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ''ಸಿದ್ದರಾಮಯ್ಯನವರು ಕ್ಷೇತ್ರದಲ್ಲಿ ಸಾಕಷ್ಟು ಹಿಡತ ಹೊಂದಿದ್ದಾರೆ. ಅವರಿಗೆ ಮತದಲ್ಲಿ ವ್ಯತ್ಯಾಸ ಉಂಟಾಗಿರುವುದು ತಿಳಿದಿತ್ತು. ಜೊತೆಯಲ್ಲಿ ಇದ್ದವರೇ ಮತ ಹಾಕಿರಲಿಲ್ಲ. ಹಾಗಿರುವಾಗ ಕಾರ್ಯಕರ್ತರಿಗೆ ಈ ವಿಚಾರವನ್ನು ಸ್ವಲ್ಪ ಚುರುಕಾಗಿ ಹೇಳಬೇಕಾಗಿತ್ತು. ಸಿದ್ದರಾಮಯ್ಯನವರು ಆ ಕೆಲಸವನ್ನು ಮಾಡಿದ್ದಾರೆ'' ಎಂದು ಹೇಳಿದರು.
''ಹಾಗೆಯೇ ಈ ವಿಚಾರದಲ್ಲಿ ಯಾರೂ ಕೂಡಾ ಹೈಕಮಾಂಡ್ಗೆ ದೂರು ನೀಡಿಲ್ಲ'' ಎಂದು ಕೂಡಾ ತಿಳಿಸಿದರು.