ವಿಜಯಪುರ, ಡಿ.22 (DaijiworldNews/MB) : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ) ವಿಜಯಪುರ ವಿಭಾಗವು ಇಡೀ ದೇಶದಲ್ಲಿ ಅತಿ ಹೆಚ್ಚು ಡೀಸೆಲ್ ಉಳಿಸಿದ ಘಟಕವೆಂಬ ಹೆಗ್ಗಳಿಕೆಗೆ ಪಾತ್ರವಾಗುವ ಮೂಲಕ ರಾಜ್ಯಕ್ಕೆ ಹೆಮ್ಮೆಯನ್ನು ತಂದು ಕೊಟ್ಟಿದೆ. ಪೆಟ್ರೋಲಿಯಂ ಸಂರಕ್ಷಣಾ ಸಂಶೋಧನಾ ಸಂಘ (ಪಿಸಿಆರ್ಎ) ಇಂಧನ ಸಂರಕ್ಷಣೆಗೆ ಸಂಬಂಧಿಸಿದಂತೆ ಈ ಘಟಕವು ದೇಶದಲ್ಲೇ ಅತ್ಯುತ್ತಮ ಎಂದು ನಿರ್ಣಯಿಸಿದೆ.
ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ಈ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಕನಿಷ್ಠ ಇಂಧನವನ್ನು ಬಳಸಿಕೊಂಡು ಹೆಚ್ಚಿನ ಮೈಲೇಜ್ ಪಡೆದಿದ್ದಕ್ಕಾಗಿ ವಿಜಯಪುರ ಜಿಲ್ಲೆಯ ಮೂರು ಡಿಪೋಗಳನ್ನು ಪ್ರಶಂಸಿಸಲಾಗಿದೆ. ಆದ್ದರಿಂದ ಈ ಘಟಕವು ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನು ಗಳಿಸಿದೆ.
ವಿಜಯಪುರ ಈಶಾನ್ಯ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ ಮಾತನಾಡಿ, ''ಹಲವು ತಿಂಗಳುಗಳಿಂದ ಕೊರೊನಾ ನವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಘಟಕವು ನಷ್ಟದಲ್ಲಿದ್ದು ನವೆಂಬರ್ನಿಂದ ಚೇತರಿಸಿಕೊಂಡು 19.17 ಕೋಟಿ ರೂ. ಆದಾಯಕ್ಕೆ ತಲುಪಿದೆ. ಲಾಕ್ಡೌನ್ ಕೊಂಚ ಸಡಿಲಿಕೆಯಾಗಿ ಬಸ್ ಸಂಚಾರ ಆರಂಭವಾದ ಅವಧಿಯಲ್ಲಿ ಪ್ರತಿ ಕಿಲೋಮೀಟರ್ ಆದಾಯವು 24.13 ರೂ. ಆಗಿತ್ತು. ಪ್ರಸ್ತುತ ಪ್ರತಿ ಕಿಲೋಮೀಟರಿಗೆ 31.20 ರೂ.ಗೆ ಏರಿಕೆ ಕಂಡಿದೆ'' ಎಂದು ತಿಳಿಸಿದರು.