ಬೆಂಗಳೂರು, ಡಿ.22 (DaijiworldNews/MB) : ತನ್ನ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಆನ್ಲೈನ್ ತರಗತಿಗಳನ್ನು ಸ್ಥಗಿತಗೊಳಿಸಿದ್ದ ಮಾನ್ಯತೆ ಪಡೆದ ಅನುದಾನರಹಿತ ಖಾಸಗಿ ಶಾಲೆಗಳ ಸಂಘ (ಆರ್ಯುಪಿಎಸ್ಎ), ಈಗ ತನ್ನ ನಿರ್ಧಾರ ವಾಪಾಸ್ ಪಡೆದಿದ್ದು ಡಿಸೆಂಬರ್ 22 ಮಂಗಳವಾರದಿಂದ ತರಗತಿಗಳನ್ನು ಪುನರಾರಂಭಿಸುವುದಾಗಿ ತಿಳಿಸಿದೆ.
ಈ ಬಗ್ಗೆ ತಿಳಿಸಿರುವ ಆರ್ಯುಪಿಎಸ್ಎ, ತನ್ನ ಬೇಡಿಕೆಗಳ ಬಗ್ಗೆ ತಿಳಿಯಲು ಸರ್ಕಾರ ಬುಧವಾರ ಸಭೆ ನಡೆಸುವ ಭರವಸೆ ನೀಡಿದ ಹಿನ್ನೆಲೆ ಮತ್ತೆ ಆನ್ಲೈನ್ ತರಗತಿಗಳನ್ನು ಪ್ರಾರಂಭಿಸಲಾಗುತ್ತಿದೆ ಎಂದಿದೆ. ಹಾಗೆಯೇ, ''ವಿದ್ಯಾರ್ಥಿಗಳ ಹಿತಾಸಕ್ತಿ ದೃಷ್ಟಿಯಿಂದ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ'' ಎಂದು ತಿಳಿಸಿದೆ.
ಈ ಮಧ್ಯೆ, ಪೋಷಕರು ಅನುದಾನರಹಿತ ಶಾಲೆಗಳ ಸಂಘದ ಬಂದ್ ಕರೆಯನ್ನು ವಿರೋಧಿಸಿದ್ದರು. ''ಆನ್ಲೈನ್ ಮತ್ತು ಆಫ್ಲೈನ್ ತರಗತಿಗಳನ್ನು ಸೀಮಿತ ಅವಧಿಗೆ ಮಾತ್ರ ನಡೆಸಲಾಗುತ್ತಿದೆ. ಅದನ್ನೂ ಕೂಡಾ ನಿಲ್ಲಿಸಿದರೆ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ'' ಎಂದು ಪೋಷಕರು ಆತಂಕ ವ್ಯಕ್ತಪಡಿಸಿದ್ದರು.
ಆನ್ಲೈನ್, ಆಫ್ಲೈನ್ ತರಗತಿಗಳನ್ನು ಡಿ. 21 ರಿಂದ ಸ್ಥಗಿತಗೊಳಿಸಲಾಗುವುದು ಎಂದು ಈ ಹಿಂದೆ ಅನುದಾನರಹಿತ ಖಾಸಗಿ ಶಾಲೆಗಳ ಸಂಘ (ಆರ್ಯುಪಿಎಸ್ಎ) ಕೈಗೊಂಡಿದ್ದ ತೀರ್ಮಾನವನ್ನು ಹಿಂಪಡೆದ ಸಂಘದ ನಿಲುವನ್ನು ಕೆಎಎಂಎಸ್, ಎಂಐಸಿಎಸ್ಎ-ಕೆ ಸ್ವಾಗತಿಸಿದೆ.