ಧಾರವಾಡ, ಡಿ.22 (DaijiworldNews/MB) : ಯೋಗೀಶಗೌಡ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬಂಧನದಲ್ಲಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆಯನ್ನು ಜ. 6ಕ್ಕೆ ಹೈಕೋರ್ಟ್ ಮುಂದೂಡಿದ್ದು ಈ ವರ್ಷ ಮಾಜಿ ಸಚಿವ ವಿನಯ ಕುಲಕರ್ಣಿ ಜೈಲಿನಲ್ಲೇ ಉಳಿಯಬೇಕಾಗಿದೆ.
ಯೋಗೀಶಗೌಡ ಗೌಡ ಹತ್ಯೆಗೆ ಸಂಚು ರೂಪಿಸಿದ ಆರೋಪದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಬಂಧವಾಗಿದ್ದು ಕುಲಕರ್ಣಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಿಶೇಷ ಸಿಬಿಐ ನ್ಯಾಯಾಲಯ ತಿರಸ್ಕರಿಸಿತ್ತು. ಈ ಹಿನ್ನೆಲೆ ಕುಲಕರ್ಣಿ ಪರ ವಕೀಲ ಹೈಕೋರ್ಟ್ ಕದ ತಟ್ಟಿದ್ದು ಈ ಅರ್ಜಿಗೆ ಆಕ್ಷೇಪ ಸಲ್ಲಿಸಲು ಹೈಕೋರ್ಟ್ ಸಿಬಿಐಗೆ ಅವಕಾಶ ನೀಡಿತ್ತು. ಅದಕ್ಕಾಗಿ ಈ ಅರ್ಜಿ ವಿಚಾರಣೆಯನ್ನು ಡಿ. 22ಕ್ಕೆ ನಿಗದಿಪಡಿಸಿತ್ತು. ಮಂಗಳವಾರ ಅರ್ಜಿ ವಿಚಾರಣೆಗೆ ಬಂದ ವೇಳೆ, ಸಿಬಿಐ ಪರ ವಕೀಲರು, ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಲು ಇನ್ನಷ್ಟು ಕಾಲಾವಕಾಶ ಕೋರಿದ್ದು ಈ ಮನವಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರಿದ್ದ ಏಕಸದಸ್ಯಪೀಠ ವಿಚಾರಣೆಯನ್ನು ಬರುವ ಜ. 6ಕ್ಕೆ ಮುಂದೂಡಿದೆ.