ಆಲಿಘಢ, ಡಿ.22 (DaijiworldNews/MB) : ''ಸರ್ಕಾರವು ಎಲ್ಲಾ ಧರ್ಮವನ್ನು ಸಮಾನವಾಗಿ ನೋಡುತ್ತದೆ. ದೇಶವು ಯಾವುದೇ ತಾರತಮ್ಯವಿಲ್ಲದೆ ಸರ್ಕಾರದ ಯೋಜನಗೆಳ ಲಾಭ ಎಲ್ಲಾ ವರ್ಗದ ಜನರಿಗೆ ತಲುಪಿಸುವತ್ತ ಹೆಜ್ಜೆ ಇಟ್ಟಿದೆ'' ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು.
ಆಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಂಗಳವಾರ ವರ್ಚುವಲ್ ಕಾನ್ಫರೆನ್ಸ್ನಲ್ಲಿ ಮಾತನಾಡಿದ ಅವರು, ''ಇಂದು ನಾವೆಲ್ಲರೂ ಧರ್ಮ, ಜಾತಿ, ವರ್ಗಗಳನ್ನು ಮೀರಿ ನಮ್ಮ ಸಾಂವಿಧಾನಿಕ ಹಕ್ಕುಗಳು ಹಾಗೂ ಭವಿಷ್ಯವನ್ನು ರೂಪಿಸಿಕೊಳ್ಳಲು ದಾರಿಯೆಡೆ ಹೆಜ್ಜೆ ಇರಿಸಲು ಸಾಧ್ಯವಾಗಿದೆ'' ಎಂದರು.
''ನಮ್ಮ ಸರ್ಕಾರವು ಬಡವರ ಪರವಾಗಿದ್ದು ಸರ್ಕಾರದ ಯೋಜನೆಗಳು ಎಲ್ಲಾ ವರ್ಗಗಳಿಗೆ ಪ್ರಯೋಜನ ಉಂಟು ಮಾಡುತ್ತಿದೆ. ಸರ್ಕಾರ ಯಾವುದೇ ಧರ್ಮ, ಜಾತಿಯ ತಾರತಮ್ಯ ಮಾಡುವುದಿಲ್ಲ. ಧರ್ಮದ ವಿಚಾರದಿಂದಾಗಿ ಯಾರೂ ಕೂಡಾ ಹಿಂದುಳಿಯಬಾರದು. ನಾವು ದೇಶದ ಪ್ರಗತಿಯ ವಿಚಾರದಲ್ಲಿ ಸೈದ್ದಾಂತಿಕ ಭಿನ್ನಾಭಿಪ್ರಾಯವನ್ನು ಬದಿಗಿರಿಸುವುದು ಅತೀ ಅಗತ್ಯ'' ಎಂದು ಹೇಳಿದರು.
''ನಮ್ಮಲ್ಲಿ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಇರಬಹುದು. ಆದರೆ ನಾವು ದೇಶದ ವಿಚಾರಕ್ಕೆ ಬಂದಾಗ ಅಭಿವೃದ್ಧಿಯತ್ತ ಮಾತ್ರ ಚಿತ್ತ ಇರಿಸಬೇಕು. ಉಳಿದವುಗಳು ದ್ವಿತೀಯವಾಗಬೇಕು'' ಎಂದರು.
''ಆಲಿಘಡ ವಿಶ್ವವಿದ್ಯಾಲಯವು ಅನೇಕ ಸ್ವಾತಂತ್ರ್ಯ ಹೋರಾಟಗಾರರನ್ನು ಸೃಷ್ಟಿಸಿದೆ'' ಎಂದು ಹೇಳಿದ ಅವರು, ''ದೇಶದ ಸ್ವಾತಂತ್ರ್ಯಕ್ಕಾಗಿ ಇಲ್ಲಿಯವರು ತಮ್ಮ ಸೈದ್ಧಾಂತಿಕ ಭಿನ್ನತೆಗಳನ್ನು ಬದಿಗಿರಿಸಿದರು. ಅವರನ್ನು ಸ್ವಾತಂತ್ರ್ಯವು ಜೊತೆಗೂಡಿಸಿದಂತೆ, ನಾವು ನವ ಭಾರತಕ್ಕಾಗಿ ಒಂದಾಗಿ ಕಾರ್ಯ ನಿರ್ವಹಿಸಬೇಕು'' ಎಂದರು.
ಸ್ವಾತಂತ್ರ್ಯ ಪೂರ್ವದ ಮೊಹಮ್ಮದನ್ ಆಂಗ್ಲೋ-ಓರಿಯಂಟಲ್ ಕಾಲೇಜು 1920 ರ ಡಿಸೆಂಬರ್ 1 ರಂದು ಆಲಿಘಡ ಮುಸ್ಲಿಂ ವಿಶ್ವವಿದ್ಯಾಲಯವಾಯಿತು.