ತಿರುವನಂತಪುರಂ, ಡಿ.22 (DaijiworldNews/HR): 28 ವರ್ಷದ ಹಿಂದೆ ನಡೆದ ಸಿಸ್ಟರ್ ಅಭಯಾ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ತಿರುವನಂತಪುರಂನ ಸಿಬಿಐ ವಿಶೇಷ ನ್ಯಾಯಾಲಯವು ಮಂಗಳವಾರದಂದು ತೀರ್ಪು ಪ್ರಕಟಿಸಿದ್ದು, ಪ್ರಮುಖ ಆರೋಪಿಗಳಾದ ಫಾದರ್ ಥಾಮಸ್, ಸಿಸ್ಟರ್ ಸೆಫಿ ಇಬ್ಬರೂ ತಪ್ಪಿತಸ್ಥರು ಎಂದು ತೀರ್ಪು ಬಂದಿದೆ.
ಆರೋಪಿಗಳ ಶಿಕ್ಷೆಯ ಪ್ರಮಾಣವನ್ನು ಬುಧವಾರ ಪ್ರಕಟಿಸಲಾಗಿತ್ತದೆ ಎಂದು ತಿಳಿದು ಬಂದಿದೆ.
1992ರ ಮಾರ್ಚ್ 27ರಂದು ಕೊಟ್ಟಾಯಂ ಪಯಸ್ ಟೆನ್ತ್ ಕಾನ್ವೆಂಟ್ನ ಬಾವಿಯಲ್ಲಿ ಸಿಸ್ಟರ್ ಅಭಯಾ ಶವ ಪತ್ತೆಯಾಗಿತ್ತು. ಇದು ಆತ್ಮಹತ್ಯೆ ಪ್ರಕರಣ ಎಂದು ಸ್ಥಳೀಯ ಪೊಲೀಸರು ಪ್ರಕರಣ ಮುಚ್ಚಿಹಾಕಲು ಯತ್ನಿಸಿದ್ದರು.
ಅಂದಿನ ಕೊಟ್ಟಾಯಂ ನಗರಸಭೆ ಚೇರ್ಮನ್ ಪಿಸಿ ಚೆರಿಯನ್ ಮಡುಕ್ಕನಿ ಮತ್ತು ಮಾನವ ಹಕ್ಕುಗಳ ಹೋರಾಟಗಾರ ಜೋಮೋನ್ ಪುತ್ತನ್ ಪುರಕಲ್ ಅವರು ಈ ಪ್ರಕರಣವನ್ನು ಕೋರ್ಟಿಗೆ ಮನವಿ ಮಾಡಿ ಬಳಿಕ ಪ್ರಕರಣದ ತನಿಖೆಯನ್ನು ಕ್ರೈಂ ಬ್ರಾಂಚ್ಗೆ ವರ್ಗಾಯಿಸಲಾಗಿತ್ತು. ಆದರೆ ಕ್ರೈಂ ಬ್ರಾಂಚ್ ಪೊಲೀಸರು ಕೂಡಾ ಅಭಯಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಹೇಳಿದ್ದರು.
ಫಾದರ್ ಥಾಮಸ್ ಎಂ.ಕೊಟ್ಟೂರ್, ಫಾದರ್ ಜೋಸ್ ಪೂತೃಕ್ಕಯಿಲ್, ಸಿಸ್ಟರ್ ಸೆಫಿ ಬಂಧಿಸಲಾಯಿತು. ಆದರೆ, ಎಲ್ಲರಿಗೂ ಜನವರಿ 1, 2009 ರಂದು ಜಾಮೀನು ಸಿಕ್ಕಿತ್ತು.