ನವದೆಹಲಿ, ಡಿ.22 (DaijiworldNews/HR): ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಮಸೂದೆಯನ್ನು ವಿರೋಧಿಸಿ ದೆಹಲಿ ಗಡಿಯಲ್ಲಿ ಮೈಕೊರೆಯುವ ಚಳಿಯ ಮಧ್ಯೆಯೂ ರೈತರು ಪ್ರತಿಭಟಿಸುತ್ತಿದ್ದು, ಬೇಡಿಕೆಗಳು ಈಡೇರಿಸದಿದ್ದಲ್ಲಿ ನಾವಿಲ್ಲಿಂದ ಸತ್ತರೂ ಹಿಂದಿರುಗುವುದಿಲ್ಲ ಎಂದು ಪ್ರತಿಭಟನಾ ನಿರತ ರೈತರು ಹೇಳಿದ್ದಾರೆ.
ಪ್ರತಿಭಟಿಸುತ್ತಿರುವ ರೈತರ ಪೈಕಿ ಸುಮಾರು 30 ಮಂದಿ ಈವರೆಗೆ ಚಳಿ ಸೇರಿದಂತೆ ವಿವಿಧ ಕಾರಣಗಳಿಂದ ಮೃತಪಟ್ಟಿದ್ದಾರೆ. ತೀವ್ರ ಚಳಿ, ಪ್ರತಿಕೂಲ ಹವಾಮಾನ ರೈತರನ್ನು ಕಂಗೆಡಿಸಿದೆ. ಪ್ರತಿಭಟನೆ ಸ್ಥಳದ ಸಮೀಪ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ ಸುಮಾರು ಹತ್ತು ಮಂದಿ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.
ಇನ್ನು ಪ್ರಧಾನಿ ನರೇಂದ್ರ ಮೋದಿಯವರು ಶೀಘ್ರದಲ್ಲೇ ಹೊಸ ಕೃಷಿ ಕಾನೂನುಗಳನ್ನು ಹಿಂಪಡೆಯಲಿದ್ದಾರೆ ಎಂಬುದಾಗಿ ಭಾವಿಸಿದ್ದೇವೆ. ಇದು ಪ್ರಜಾಪ್ರಭುತ್ವ ಮೋದಿ ಅವರು ನಮ್ಮ ಮಾತನ್ನು ಕೇಳಬೇಕು ಎಂದು ರೈತ ಪಾಘ್ ಸಿಂಗ್ ಹೇಳಿದ್ದಾರೆ.
ಸುಮಾರು ನಾಲ್ಕು ವಾರಗಳಿಂದ ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ರಾಜಸ್ಥಾನಗಳ ರೈತರು ದೆಹಲಿ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.