ಬೆಂಗಳೂರು, ಡಿ.21 (DaijiworldNews/MB) : ಬೆಂಗಳೂರು ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ), ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸಂಘಟನೆ ಮುಖಂಡರು ಸೇರಿದಂತೆ 17 ಮಂದಿ ಆರೋಪಿಗಳನ್ನು ರಾಷ್ಟ್ರೀಯ ತನಿಖಾ ದಳದ (ಎನ್ಐಎ) ಅಧಿಕಾರಿಗಳು ಬಂಧಿಸಿದ್ದಾರೆ.
ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಆಗಸ್ಟ್ 11ರಂದು ರಾತ್ರಿ ದುಷ್ಕರ್ಮಿಗಳ ತಂಡ ಗಲಭೆ ಸೃಷ್ಟಿಸಿದ್ದು ಠಾಣೆಗೆ, 60ಕ್ಕೂ ಹೆಚ್ಚು ವಾಹನಗಳಿಗೆ ಹಾಗೂ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಗೂ ನುಗ್ಗಿ ಬೆಂಕಿ ಹಚ್ಚಿತ್ತು.
ಈ ಬಗ್ಗೆ ಮಾಹಿತಿ ನೀಡಿದ ಅಧಿಕಾರಿಗಳು, ಎಸ್ಡಿಪಿಐ, ಪಿಎಫ್ಐ ಸಂಘಟನೆ ಮುಖಂಡರೇ ಪೂರ್ವಭಾವಿ ಸಭೆ ನಡೆಸಿ ಗಲಭೆಗೆ ಪ್ರಚೋದನೆ ನೀಡಿದ್ದು ಅದಕ್ಕೆ ಸಂಬಂಧಪಟ್ಟ ಸಾಕ್ಷಿ ಸಂಗ್ರಹಿಸಿ, ಸಂಘಟನೆ ಮುಖಂಡರು ಸೇರಿ 17 ಮಂದಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಎಸ್ಡಿಪಿಐ ಬೆಂಗಳೂರು ಜಿಲ್ಲಾ ಘಟಕದ ಅಧ್ಯಕ್ಷ ಮೊಹಮ್ಮದ್ ಷರೀಫ್, ಕೆ.ಜಿ.ಹಳ್ಳಿ ವಾರ್ಡ್ ಅಧ್ಯಕ್ಷ ಇಮ್ರಾನ್ ಅಹ್ಮದ್, ಮುಖಂಡರಾದ ರೂಬಾನ್ ವಗಾಸ್, ಶಬ್ಬರ್ ಖಾನ್ ಹಾಗೂ ಶೆಖ್ ಅಜ್ಮಲ್ ಪ್ರಮುಖ ಆರೋಪಿಗಳು ಎಂದು ವರದಿ ತಿಳಿಸಿದೆ.
ಆರೋಪಿಗಳಾದ ಸದ್ದಾಂ, ಸೈಯದ್ ಸುಹೇಲ್, ಖಲೀಂಮುಲ್ಲಾ, ಸಾಮಾಜಿಕ ಜಾಲತಾಣಗಳ ಮೂಲಕ ಜನರನ್ನು ಪ್ರಚೋದಿಸಿದ್ದರು. ಪ್ರಚೋದನಾಕಾರಿ ಪೋಸ್ಟ್ ಹಾಗೂ ಬರಹಗಳನ್ನು ಆರೋಪಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು ಎಂದು ವರದಿಯಾಗಿದೆ.
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಹಲವರನ್ನು ಬಂಧಿಸಿದ್ದು ಈಗ ಬಂಧಿತರ ಸಂಖ್ಯೆ 187 ಕ್ಕೆ ಏರಿದೆ.
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಬಂಧನಕ್ಕೆ ಒಳಗಾಗಿರುವ ಮಾಜಿ ಮೇಯರ್ ಸಂಪತ್ರಾಜ್ ಸಲ್ಲಿಸಿರುವ ಜಾಮೀನು ಅರ್ಜಿಯನ್ನು ಹೈಕೋರ್ಟ್ ಜನವರಿ ಮೊದಲ ವಾರಕ್ಕೆ ಮುಂದೂಡಿದ್ದು ಈ ವರ್ಷ ಸಂಪತ್ರಾಜ್ ಜೈಲಿನಲ್ಲೇ ಉಳಿಯಬೇಕಾಗಿದೆ.