ಮೈಸೂರು, ಡಿ.21 (DaijiworldNews/MB) : ''ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಹತಾಶರಾಗಿ ಸತ್ತ ಕೋಳಿಯಂತಾಗಿದ್ದಾರೆ. ಅವರಿಗೆ ಯಾವುದೇ ನಾಚಿಗೆ ಎಂಬುದು ಇಲ್ಲ'' ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್ ಲೇವಡಿ ಮಾಡಿದ್ದಾರೆ.
ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ''ಸಿದ್ದರಾಮಯ್ಯನವರು ಚಾಮುಡೇಶ್ವರಿ ಕ್ಷೇತ್ರದಲ್ಲಿ ಸೋಲಲು ಪಕ್ಷದವರೇ ಕಾರಣ ಎಂದು ಹೇಳಿದ್ದಾರೆ. ಹಾಗಿರುವಾಗ ಅವರು ಪಕ್ಷದವರ ಮೇಲೆ ಶಿಸ್ತು ಕ್ರಮ ಯಾಕೆ ಕೈಗೊಂಡಿಲ್ಲ'' ಎಂದು ಪ್ರಶ್ನಿಸಿದರು.
''ಕಾಂಗ್ರೆಸ್ನಲ್ಲಿಯೇ ಸಿದ್ದರಾಮಯ್ಯನವರ ಬಗ್ಗೆ ತೀವ್ರ ಅಸಮಧಾನವಿದೆ.ಕಾಂಗ್ರೆಸ್ ಪತನದ ಹಾದಿ ಹಿಡಿದಿದೆ'' ಎಂದು ಹೇಳಿದ ಅವರು, ''ಎಚ್.ಸಿ.ಮಹದೇವಪ್ಪ ಹಾಗೂ ಸಿದ್ದರಾಮಯ್ಯ ನಡುವೆ ಹಣದ ವಿಚಾರದಲ್ಲಿ ಭಿನ್ನಾಭಿಪ್ರಾಯವಿದೆ'' ಎಂದು ಹೇಳಿದರು.
ಇನ್ನು ''ಜೆಡಿಎಸ್ ತನ್ನ ನೆಲೆಯಲ್ಲಿಯೇ ಸೋತ ಕಾರಣ ಬಿಜೆಪಿ ಜತೆ ವಿಲೀನ ಅಥವಾ ಹೊಂದಾಣಿಕೆಗೆ ಎಚ್.ಡಿ.ದೇವೇಗೌಡ ಚಿಂತಿಸಿರಬೇಕು'' ಎಂದು ಅನುಮಾನ ವ್ಯಕ್ತಪಡಿಸಿದ ಅವರು, ''ಬಿದ್ದ ಬೆಂಕಿಯಲ್ಲಿ ಕೈ ಕಾಯಿಸಿಕೊಳ್ಳುವುದು ದೇವೇಗೌಡರ ಸ್ವಭಾವ'' ಎಂದು ವಾಗ್ದಾಳಿ ನಡೆಸಿದರು.