ಮಂಗಳೂರು, ಡಿ.21 (DaijiworldNews/MB) : ಎಂಟು ವರ್ಷದ ಬಾಲಕನನ್ನು ಅಪಹರಿಸಿದ ಉಜಿರೆಯ ಪ್ರಕರಣವನ್ನು ಭೇದಿಸಿದ್ದಕ್ಕಾಗಿ ಡಿಸೆಂಬರ್ 21, ಸೋಮವಾರ ಡಿಸಿ ಕಚೇರಿಯಲ್ಲಿ ಪೊಲೀಸ್ ಅಧೀಕ್ಷಕ ಬಿ.ಎಂ.ಲಕ್ಷ್ಮಿ ಪ್ರಸಾದ್ ಮತ್ತು ಅವರ ತಂಡವನ್ನು ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಅಭಿನಂದಿಸಿದರು.
ಈ ಬಗ್ಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ, "ಎಸ್ಪಿ ಬಿಎಂ ಲಕ್ಷ್ಮಿ ಪ್ರಸಾದ್ ನೇತೃತ್ವದ ಪೊಲೀಸ್ ತಂಡವು ಉಜಿರೆಯಲ್ಲಿ ನಡೆದ ಅಪಹರಣ ಪ್ರಕರಣವನ್ನು ಬಗೆಹರಿಸುವಲ್ಲಿ ಮತ್ತು ಭಾಗಿಯಾಗಿರುವವರನ್ನು ಬಂಧಿಸುವಲ್ಲಿ ಮಹತ್ತರ ಕೆಲಸ ಮಾಡಿದೆ. ಅದೇ ಸಮಯದಲ್ಲಿ ಎರಡು ಪ್ರತ್ಯೇಕ ಘಟನೆಗಳು ನಡೆದಿವೆ. ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆ ಹಲ್ಲೆ ನಡೆಸಿದರೆ, ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸರ್ಕಾರ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಿದೆ'' ಎಂದು ತಿಳಿಸಿದರು.
ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮಿ ಪ್ರಸಾದ್ ಅವರು, ''ಉಜಿರೆ ಬಾಲಕನ ಅಪಹರಣ ಪ್ರಕರಣದ ಬಗೆಹರಿಸಲು ಅತ್ಯುತ್ತಮ ತಂಡದ ಕೆಲಸವೇ ಕಾರಣ. ಸಬ್ ಇನ್ಸ್ಪೆಕ್ಟರ್ ನಂದಕುಮಾರ್ ಅವರು 24 ಗಂಟೆಗಳ ಕಾಲ ಕಾರ್ಯನಿರ್ವಹಿಸಿದರು. ಅವರು ಮಗುವಿನ ಪೋಷಕರಿಂದ ಮಾಹಿತಿ ಸಂಗ್ರಹಿಸುವಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದರು. ಅಷ್ಟೇ ಅಲ್ಲದೇ ಬಾಲಕನ ರಕ್ಷಣೆಗಾಗಿ ಕೋಲಾರಕ್ಕೆ ಸಹ ತೆರಳಿದರು. ಆರೋಪಿಗಳ ಪತ್ತೆ ಕಾರ್ಯದಲ್ಲಿ ಸ್ಥಳೀಯರ ಮಾಹಿತಿ ಮತ್ತು ಬೆಂಬಲ ನಮಗೆ ಸಹಾಯ ಮಾಡಿತು. ನಮ್ಮ ಕೆಲಸವನ್ನು ಗೌರವಿಸಿ ಗುರುತಿಸಿದ್ದಕ್ಕಾಗಿ ಸಂಸದ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಧನ್ಯವಾದ ಅರ್ಪಿಸುತ್ತೇನೆ'' ಎಂದು ಹೇಳಿದರು.
ಡಿವೈಎಸ್ಪಿ ವ್ಯಾಲೆಂಟೈನ್ ಡಿಸೋಜಾ, ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ಸಂದೇಶ್, ಸಬ್ ಇನ್ಸ್ಪೆಕ್ಟರ್ ನಂದಕುಮಾರ್, ಪಿಎಸ್ಐ ರವಿ, ಈರಯ್ಯ, ಪವನ್, ಮೇಯರ್ ದಿವಾಕರ್ ಪಾಂಡೇಶ್ವರ ಮತ್ತು ಇತರರು ಉಪಸ್ಥಿತರಿದ್ದರು.