ಬೆಂಗಳೂರು,ಡಿ.21 (DaijiworldNews/HR): ವಿಶ್ವದ ಮೂರು ದೇಶಗಳಲ್ಲಿ ಹೊಸ ಕೊರೊನಾ ಪ್ರಭೇದ ಪತ್ತೆಯಾಗಿದ್ದು, ಇದಕ್ಕೆ ಮುಂಜಾಗ್ರತೆ ಅತ್ಯಗತ್ಯ. ಆದರೆ ಕರ್ನಾಟಕದಲ್ಲಿ ಮತ್ತೆ ಲಾಕ್ಡೌನ್ ಹೇರುವ ಪ್ರಶ್ನೆಯೇ ಇಲ್ಲ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಈ ಕುರಿತು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕೊರೊನಾ ಹೊಸ ಪ್ರಭೇದದಲ್ಲಿ ಹರಡುವಿಕೆ ಗುಣ ಹೆಚ್ಚಾಗಿರುವುದರಿಂದ ಕರ್ನಾಟಕದ ಜನರು ಕೂಡಾ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು" ಎಂದರು.
ಇನ್ನು "ಬ್ರಿಟನ್ ದೇಶದಲ್ಲಿ ಈ ಹೊಸ ಕೊರೊನಾ ಪ್ರಭೇಧ ಆರಂಭವಾಗಿದ್ದು, ಅಲ್ಲಿಂದ ರಾಜ್ಯಕ್ಕೆ 530 ಮಂದಿ ಬಂದಿದ್ದಾರೆ, ಅದರಲ್ಲಿ 138 ಪ್ರಯಾಣಿಕರು ಪರೀಕ್ಷೆ ಮಾಡಿಸದೇ ಬಂದಿದ್ದು ಅವರು ಒಂದು ವಾರ ಹೋಮ್ ಕ್ವಾರಂಟೈನ್ಗೆ ಒಳಗಾಗಬೇಕು. ಜೊತೆಗೆ ಕೇಂದ್ರ ಸರ್ಕಾರದ ಆದೇಶದಂತೆ ವಿದೇಶದಿಂದ ಬಂದ ಪ್ರಯಾಣಿಕರು ಕಡ್ಡಾಯವಾಗಿ ಕೊರೊನಾ ಪರೀಕ್ಷೆಯನ್ನು ಮಾಡಿಸಿಕೊಳ್ಳಲೇಬೇಕು" ಎಂದು ಹೇಳಿದ್ದಾರೆ.