ತಿರುವನಂತಪುರ, ಡಿ.21 (DaijiworldNews/PY): ಡಿ.23ರ ಬುಧವಾರದಂದು ಕೇಂದ್ರ ಸರ್ಕಾರದ ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿಚಾರವಾಗಿ ಚರ್ಚೆ ನಡೆಸಲು ರಾಜ್ಯ ವಿಧಾನಸಭೆಯ ಅಧಿವೇಶನ ಕರೆಯಲು ಸಿಪಿಐ ನೇತೃತ್ವದ ಎಲ್ಡಿಎಫ್ ಸರ್ಕಾರ ಸೋಮವಾರ ತೀರ್ಮಾನ ಕೈಗೊಂಡಿದೆ.
ಸೋಮವಾರ ಬೆಳಗ್ಗೆ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಈ ಸಂದರ್ಭ ರಾಜ್ಯಪಾಲರಿಗೆ ವಿಶೇಷ ಸಭೆ ಕರೆಯುವಂತೆ ಶಿಫಾರಸು ನೀಡುವ ಬಗ್ಗೆ ಕೂಡಾ ತೀರ್ಮಾನ ಮಾಡಲಾಗಿದೆ ಎಂದು ಮೂಲಗಳು ಹೇಳಿವೆ.
"ಡಿ.23ರಂದು ಕೇರಳ ಸಚಿವ ಸಂಪುಟ ವಿಶೇಷ ಅಧಿವೇಶನ ಕರೆಯಲು ತೀರ್ಮಾನ ಕೈಗೊಂಡಿದೆ. ರೈತರ ಹೋರಾಟಕ್ಕೆ ಕೇರಳ ಸರ್ಕಾರ ಸಂಪೂರ್ಣವಾದ ಬೆಂಬಲ ನೀಡುತ್ತದೆ" ಎಂದು ಕೇರಳದ ಹಣಕಾಸು ಸಚಿವ ಥಾಮಸ್ ಐಸಾಕ್ ಟ್ವೀಟ್ ಮೂಲಕ ಹೇಳಿದ್ದಾರೆ.