ಬೆಂಗಳೂರು,ಡಿ.21 (DaijiworldNews/HR): ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಮತ್ತು ಅವರ ಸಹೋದರ ದೀಪಕ್ ಹತ್ಯೆಗೆ ಸಂಚು ರೂಪಿಸಿದ್ದ ಬಾಂಬೆ ರವಿ ತಂಡದ ಏಳು ಮಂದಿಯನ್ನು ದಕ್ಷಿಣ ವಿಭಾಗ ಪೊಲೀಸರು ಬಂಧಿಸಿದ್ದಾರೆ.
ದರ್ಶನ್, ಗಿರೀಶ್, ಮೋಹನ್, ರಾಜನ್ ಸೇರಿ ಏಳು ಮಂದಿಯನ್ನು ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.
ಪ್ರಮುಖ ಆರೋಪಿಗಳಾದ ಬಾಂಬೆ ರವಿ ಮತ್ತು ನೀಲಸಂದ್ರದ ಮಂಜುನಾಥ್ ಎಂಬುವರು ಸ್ಥಳದಿಂದ ಪರಾರಿಯಾಗಿದ್ದು, ಅವರಿಗಾಗಿ ಶೋಧಕಾರ್ಯ ಮುಂದುವರಿದಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ, ಭಾನುವಾರ ಮುಂಜಾನೆ ಜಯನಗರ ಇನ್ಸ್ಪೆಕ್ಟರ್ ಗಸ್ತಿನಲ್ಲಿದ್ದದ್ದ ವೇಳೆ ನ್ಯಾಷನಲ್ ಕಾಲೇಜು ಬಳಿ ಕಾರಿನಲ್ಲಿ ಕುಳಿತು ಕೆಲ ವ್ಯಕ್ತಿಗಳು ಕೊಲೆ ಸಂಬಂಧ ಜೋರಾಗಿ ಮಾತನಾಡುತ್ತಿದ್ದಾರೆ ಎಂದು ಬಾತ್ಮೀದಾರರ ಮೂಲಕ ಮಾಹಿತಿವೊಂದು ಸಿಕ್ಕಿದೆ. ಕೂಡಲೇ ಇನ್ಸ್ಪೆಕ್ಟರ್ ಸ್ಥಳಕ್ಕೆ ಹೋಗಿ, ಪರಿಶೀಲಿಸಲು ಮುಂದಾಗಿದ್ದಾರೆ. ಆಗ ಆರೋಪಿಗಳು ಕಾರು ಚಾಲನೆ ಮಾಡಿ ಪೊಲೀಸ್ ಸಿಬ್ಬಂದಿ ಮೇಲೆ ಹತ್ತಿಸಲು ಯತ್ನಿಸಿದ್ದಾರೆ. ಬಳಿಕ ಪೊಲೀಸ್ ಜೀಪ್ನಿಂದ ಕಾರನ್ನು ಅಡ್ಡಗಟ್ಟಿ, ಕಾರಿನಿಂದ ಇಳಿಯುವಂತೆ ಹೇಳಿದ್ದಕ್ಕೆ ಕಾರಿನಲ್ಲಿದ್ದ ಆರೋಪಿಯೊಬ್ಬ ಕಿಟಕಿಯಿಂದಲೇ ಮಾರಕಾಸ್ತ್ರದಿಂದ ಪೊಲೀಸರ ಮೇಲೆ ದಾಳಿ ನಡೆಸಿದ್ದಾನೆ. ಕೂಡಲೇ ಇನ್ನಷ್ಟು ಮಂದಿ ಪೊಲೀಸರು ಸ್ಥಳಕ್ಕೆ ಬಂದು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ಕರೆದೊಯ್ಯ ವಿಚಾರಣೆ ನಡೆಸುವಾಗ ಹತ್ಯೆಗೆ ಸಂಚು ರೂಪಿಸಿದ್ದರು ಎಂಬುದು ಗೊತ್ತಾಗಿದೆ.